ADVERTISEMENT

ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 25 ಮೇ 2021, 20:03 IST
Last Updated 25 ಮೇ 2021, 20:03 IST
ವಿನಯ ಕುಲಕರ್ಣಿ
ವಿನಯ ಕುಲಕರ್ಣಿ   

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದ ಆರೋಪಿ ವಿನಯ್ ಕುಲಕರ್ಣಿಗೆ ಜಮೀನು ಮಂಜೂರು ಮಾಡಲು ನಿರಾಕರಿಸಿರುವ ಹೈಕೋರ್ಟ್‌, ಅರ್ಜಿ ವಜಾಗೊಳಿಸಿದೆ.

‘ಘಟನೆ ನಡೆದ ಭಾಗದಲ್ಲಿ ಆರೋಪಿ ಪ್ರಭಾವಿ ವ್ಯಕ್ತಿ ಆಗಿರುವ ಕಾರಣ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಜಾಮೀನು ಕೋರಿ ಪದೇ ‍ಪದೇ ಅರ್ಜಿ ಸಲ್ಲಿಸುತ್ತಿರುವ ವಿನಯ ಕುಲಕರ್ಣಿ, ಅರ್ಜಿ ಪರಿಗಣಿಸಲು ಪೂರಕವಾದ ಯಾವುದೇ ಹೊಸ ಅಂಶಗಳನ್ನು ಒದಗಿಸಿಲ್ಲ’ ಎಂದು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

‘ಹತ್ಯೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಒಳಸಂಚು ರೂಪಿಸಿರುವ ಬಗ್ಗೆ ಬಲವಾದ ಸಾಕ್ಷ್ಯಗಳಿವೆ. ಜಾಮೀನು ಮಂಜೂರು ಮಾಡಿದರೆ ಅವು ನಾಶವಾಗುವ ಸಾಧ್ಯತೆ ಇದೆ’ ಎಂದುಸಿಬಿಐ ಪರ ವಕೀಲ ಪಿ. ಪ್ರಸನ್ನಕುಮಾರ್ ವಾದ ಮಂಡಿಸಿದರು.

ADVERTISEMENT

‘ಸಿಬಿಐ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಅರ್ಜಿದಾರರಿಗೂ ಈ ಹತ್ಯೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಜಾಮೀನು ಮಂಜೂರು ಮಾಡಬೇಕು’ ಎಂದು ಅರ್ಜಿದಾರರ ಪರ ವಕೀಲ ಶಶಿಕಿರಣ ಶೆಟ್ಟಿ ಮನವಿ ಮಾಡಿದರು.

2016ರ ಜೂನ್ 15ರಂದು ಯೋಗೀಶಗೌಡ ಹತ್ಯೆಯಾಗಿತ್ತು. 2020 ನವೆಂಬರ್ 5ರಂದು ವಿನಯ ಕುಲಕರ್ಣಿ ಬಂಧನವಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದ್ದರಿಂದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.