ADVERTISEMENT

ಎರಡು ಗುಂಪುಗಳ ಮಧ್ಯೆ ಸಂಘರ್ಷ; 20 ಜನರಿಗೆ ಗಾಯ

ರಾಜಕೀಯ ವೈಷಮ್ಯದ ಆರೋಪ

​ಪ್ರಜಾವಾಣಿ ವಾರ್ತೆ
Published 27 ಮೇ 2019, 20:00 IST
Last Updated 27 ಮೇ 2019, 20:00 IST

ಕಲಬುರ್ಗಿ: ಯಡ್ರಾಮಿ ತಾಲ್ಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿದಲಿತರು ಮತ್ತು ಲಿಂಗಾಯತ ಸಮುದಾಯದ ಗುಂಪುಗಳ ಮಧ್ಯೆಘರ್ಷಣೆ ನಡೆದಿದ್ದು, 20ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

ದಲಿತ ಯುವಕರೊಬ್ಬರ ಮದುವೆ ಮೆರವಣಿಗೆಯು ಹನುಮಂತ ದೇವರ ದರ್ಶನಕ್ಕೆ ಬಂದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ.

ಘರ್ಷಣೆಯ ಮಾಹಿತಿ ತಿಳಿದು ಜೇವರ್ಗಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಡಿ.ಬಿ. ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ಆಗಲೂ ಗುಂಪೊಂದು ಪೊಲೀಸರ ವಾಹನದತ್ತ ಕಲ್ಲು ತೂರಿತು. ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಬಿಗುವಿನಿಂದ ಕೂಡಿದ್ದು, ಪೊಲೀಸ್‌ ಪಹರೆ ಹಾಕಲಾಗಿದೆ.ಗಾಯಾಳುಗಳನ್ನು ಕಲಬುರ್ಗಿ, ಜೇವರ್ಗಿ, ಯಡ್ರಾಮಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ADVERTISEMENT

ಘಟನೆ ವಿವರ: ‘ಗುಲಬರ್ಗಾಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಡಾ. ಉಮೇಶ ಜಾಧವ ಗೆದ್ದಿದ್ದಕ್ಕಾಗಿ ಫಲಿತಾಂಶದ ದಿನದಂದು ವೀರಶೈವ ಲಿಂಗಾಯತರು ಹಾಗೂ ಕುರುಬ ಸಮುದಾಯದವರು ದಲಿತ ಕೇರಿಯ ಬಳಿ ವಿಜಯೋತ್ಸವ ಆಚರಿಸಲು ಬಂದಿದ್ದರು. ಕೆಲ ಯುವಕರು ದಲಿತ ಯುವಕರ ಬಳಿ ಬಂದು ಕೇಕೆ ಹಾಕಿ ನಗಲು ಶುರು ಮಾಡಿದ್ದರು. ಇದನ್ನು ಪ್ರತಿರೋಧಿಸಿದ್ದಕ್ಕಾಗಿ ಮಾತಿಗೆ ಮಾತು ಬೆಳೆಯಿತು. ಅದೇ ಸೇಡು ಇಟ್ಟುಕೊಂಡು ಭಾನುವಾರ ಕಲ್ಲು ತೂರಾಟ ನಡೆಸಿದರು’ ಎಂದು ದಲಿತ ಯುವಕರು ಆರೋಪಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಯಡ್ರಾಮಿ ತಹಶೀಲ್ದಾರ್‌ ಬಸಲಿಂಗಪ್ಪ ನಾಯ್ಕೋಡಿ, ‘ದಲಿತ ಯುವಕರೊಬ್ಬರ ಮದುವೆ ಮುಗಿದ ಬಳಿಕ ನೂತನ ದಂಪತಿ ದೇವಸ್ಥಾನದವರೆಗೆ ಮೆರವಣಿಗೆಯ ಮೂಲಕ ಬಂದರು. ಬೇರೆ ಊರಿಂದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಯುವಕರೊಬ್ಬರ ಬೈಕ್‌ ಗ್ರಾಮದ ಯುವಕರೊಬ್ಬರಿಗೆ ಡಿಕ್ಕಿ ಹೊಡೆಯಿತು. ಇದು ಘರ್ಷಣೆಗೆ ಕಾರಣವಾಗಿರಬಹುದು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಎರಡೂ ಗುಂಪಿನವರನ್ನು ಕರೆಸಿ ಸಂಧಾನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.