ನಟ ವಿಷ್ಣುವರ್ಧನ್ ಸಮಾಧಿ ನೆಲಸಮಕ್ಕೆ ಮೊದಲು ಮತ್ತು ನಂತರ
ಬೆಂಗಳೂರು: ಕೆಂಗೇರಿ–ಉತ್ತರಹಳ್ಳಿ ರಸ್ತೆಯಲ್ಲಿನ ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಸ್ಮಾರಕ ನೆಲಸಮಗೊಳಿಸಿರುವುದು ಆ ಭೂಮಿ ಕುರಿತ ವಿವಾದಕ್ಕೆ ಮತ್ತೆ ಮರುಜೀವ ನೀಡಿದೆ.
ಅದು ಕೆಲ ದಶಕಗಳ ಹಿಂದೆ ಚಿತ್ರೋದ್ಯಮದ ಅಭಿವೃದ್ಧಿಗಾಗಿ ಸರ್ಕಾರವೇ ನೀಡಿದ್ದ ಜಾಗವಾಗಿದ್ದರೂ ಆಯಾ ಕಾಲದ ಆಡಳಿತಾರೂಢ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಚಿತ್ರರಂಗದ ಮೇರು ನಟನಿಗೆ ಇಂದು ಆರಡಿ–ಮೂರಡಿ ಜಾಗವೂ ಸಿಗದ ದುಃಸ್ಥಿತಿ ಎದುರಾಗಿದೆ ಎಂದು ವಿಷ್ಣುವರ್ಧನ್ ಅಭಿಮಾನಿಗಳು ಆಪಾದಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮದ ಅಂದಿನ ಸ.ನಂ.26ರಲ್ಲಿ 1970ರಲ್ಲಿ ಅಂದಿನ ಸರ್ಕಾರ ನಟ ಟಿ.ಎನ್. ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ 20 ಎಕರೆ ಜಮೀನು ನೀಡಿತ್ತು. ಈ ಭೂಮಿಯನ್ನು ಮಾರಾಟ, ಗುತ್ತಿಗೆ ಮತ್ತು ಆಧಾರ ಮಾಡಬಾರದೆಂದು ಷರತ್ತು ವಿಧಿಸಿತ್ತು.
ಸ್ಟುಡಿಯೋ ಕಟ್ಟಲೆಂದು ದೀರ್ಘಾವಧಿ ಗುತ್ತಿಗೆಯ ಮೇಲೆ ನೀಡಿದ ಜಮೀನಿನಲ್ಲಿ, ಸ್ಟುಡಿಯೋ ಮೇಲ್ದರ್ಜೆಗೇರಿಸಲು ಬೇಕಾದ ಹಣಕ್ಕಾಗಿ ಹತ್ತು ಎಕರೆ ಜಮೀನು ಮಾರುವುದಾಗಿ ಬಾಲಣ್ಣನವರ ಮಕ್ಕಳು ಸರ್ಕಾರಕ್ಕೆ ಹೇಳುತ್ತಾರೆ. ನಾಲ್ಕು ಷರತ್ತುಗಳ ಮೇಲೆ ವಿಶೇಷ ಜಿಲ್ಲಾಧಿಕಾರಿಗಳು 2003ರಲ್ಲಿ ಅದಕ್ಕೆ ಅನುಮತಿಯನ್ನೂ ನೀಡುತ್ತಾರೆ. ಮಾರುವ ಮೊದಲು ಬಾಲಣ್ಣನ ಮಕ್ಕಳಾದ ಗಣೇಶ್ ಮತ್ತು ಶ್ರೀನಿವಾಸ್ ತಲಾ ಹತ್ತು ಎಕರೆಯಾಗಿ ವಿಭಾಗಿಸಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಶ್ರೀನಿವಾಸ್ ಹತ್ತು ಎಕರೆ ಜಮೀನನ್ನು ಅಂದೇ ಮಾರಿದ್ದರು. ಗಣೇಶ್ ಪಾಲಿಗೆ ಬಂದ ಹತ್ತು ಎಕರೆ ಉಳಿದುಕೊಂಡಿದೆ. ಆದರೆ ಅಭಿಮಾನ್ ಸ್ಟುಡಿಯೋ ಮಾತ್ರ ಅಲ್ಲಿಂದ ಇಲ್ಲಿತನಕ ಯಾವುದೇ ಅಭಿವೃದ್ಧಿ ಕಂಡಿಲ್ಲ.
‘ಈಗ ನನ್ನ ಇಬ್ಬರು ಸಹೋದರರು ತೀರಿಕೊಂಡಿದ್ದಾರೆ. ಶ್ರೀನಿವಾಸ್ ಅವರ ಪುತ್ರ ಕಾರ್ತಿಕ್ ಮತ್ತೋರ್ವ ಸಹೋದರ ಗಣೇಶ್‌ಗೆ ಸೇರಿದ ಜಾಗವನ್ನು ಈಗ ತಮ್ಮದಾಗಿಸಿಕೊಂಡಿದ್ದಾರೆ. ಹತ್ತು ಎಕರೆ ಮಾರಾಟವಾದಾಗ ನಾನು ಅದರಲ್ಲಿ ಪಾಲು ಕೇಳಿ ನ್ಯಾಯಾಲಯದ ಮೆಟ್ಟಿಲು ಏರಿದೆ. ಜಮೀನು ಮಾರಿದ ಎರಡು ವರ್ಷಗಳ ಒಳಗೆ ಸ್ಟುಡಿಯೋ ಅಭಿವೃದ್ಧಿ ಕುರಿತು ಸರ್ಕಾರದ ಗಮನಕ್ಕೆ ತರಬೇಕು ಎಂದು ಅಂದಿನ ವಿಶೇಷ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದರು. ಯಾವುದೇ ಅಭಿವೃದ್ಧಿಯಾಗದ ಕಾರಣ ಈ ಜಮೀನು ಸರ್ಕಾರ ಹಿಂಪಡೆಯುವುದಾಗಿ 2015ರಲ್ಲಿ ಬೆಂಗಳೂರು ಜಿಲ್ಲಾಧಿಕಾರಿಗಳು ನೋಟಿಸ್ ಕೂಡ ನೀಡುತ್ತಾರೆ. ಆದರೆ ಈಗ ಕಾರ್ತಿಕ್ ಮಧುರೈ ಕಂಪನಿಯೊಂದರ ಜತೆ ಕೈಜೋಡಿಸಿ ಉಳಿದ ಭೂಮಿಯಲ್ಲಿ ಮಾಲ್ ನಿರ್ಮಿಸಲು ಸಿದ್ಧವಾಗಿದ್ದಾರೆಂಬ ಮಾಹಿತಿ ಇದೆ. ಸಾಲ ಪಡೆದು ಭೂಮಿ ನೀಡುತ್ತಿದ್ದಾರೋ, ಮಾರಾಟ ಮಾಡಿದ್ದಾರೋ ಅಥವಾ ಭೋಗ್ಯಕ್ಕೆ ನೀಡುತ್ತಿದ್ದಾರೋ ಗೊತ್ತಿಲ್ಲ’ ಎಂದು ಬಾಲಣ್ಣ ಪುತ್ರಿ ಗೀತಾ ಬಾಲಿ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶ ಪ್ರತಿ
ಈ ಸಂಬಂಧ ಬಾಲಣ್ಣ ಕುಟುಂಬ ಪರ ದೂರುದಾರ ಕಾರ್ತೀಕ್ ಅವರನ್ನು ಸಂಪರ್ಕಿಸಲು ಯತ್ನಿಸಲಾಗಿದ್ದು, ಅವರು ಸಂಪರ್ಕಕ್ಕೆ ಸಿಗಲಿಲ್ಲ.
1970 ಮಾರ್ಚ್ 3ರ ಸರ್ಕಾರದ ಆದೇಶದ ನಂ.ಆರ್‌ಡಿ.37.ಜಿಎನ್‌ಎ.69ರಂತೆ, ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕಾಗಿ ಆಗಿದೆಯೋ ಅಂದರೆ ಮಂಜೂರಾದ 10 ಎಕರೆ ಪರಭಾರೆ ಮಾಡಿ, ಉಳಿದ 10 ಎಕರೆ ಜಮೀನನ್ನು ಅಭಿವೃದ್ಧಿಗೆ ಉಪಯೋಗಿಸತಕ್ಕದ್ದು.
ಮಾರಾಟ ಮಾಡಲು ಅನುಮತಿ ನೀಡಿದ ಭೂಮಿಯ ಅಭಿವೃದ್ಧಿಯನ್ನು ಅಭಿಮಾನ್ ಸ್ಟುಡಿಯೋ ನಿರ್ಮಾಣ ಮತ್ತು ನಿರ್ಮಾಣಕ್ಕೆ ಯಾವುದೇ ರೀತಿ ಅಡ್ಡಿಬಾರದಂತೆ ಉಪಯೋಗಿಸುವ ಷರತ್ತಿನ ಮೇಲೆ ನೀಡಲಾಗಿದೆ.
ಬಾಕಿ ಉಳಿದಿರುವ 10 ಎಕರೆ ಜಮೀನನ್ನು ಯಾವುದೇ ಕಾಲದಲ್ಲಿ ಅಥವಾ ಭೂಮಿಯನ್ನು ಮಾರಲು; ಗುತ್ತಿಗೆಗೆ ಕೊಡಲು; ಅಡಮಾನ ಮಾಡಲು ಹಾಗೂ ವರ್ಗಾಯಿಸಲು ಅಥವಾ ಬೇರೆ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ಉದ್ದೇಶಿಸಿದ್ದರೆ ಪ್ರಶ್ನಿತ ಜಮೀನನ್ನು ಯಾವುದೇ ತಿಳಿವಳಿಕೆ ನೀಡದೆ ಸರ್ಕಾರದ ವಶಕ್ಕೆ ಪಡೆದು ಕೊಳ್ಳಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.