ADVERTISEMENT

ಅಪಘಾತ: ಸಿಐಡಿ ತನಿಖೆಗೆ ಆಗ್ರಹ

ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 21:59 IST
Last Updated 15 ಫೆಬ್ರುವರಿ 2021, 21:59 IST
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳದ ಕಾರ್ಯಕರ್ತರು ಇತ್ತೀಚೆಗೆ ಅಂಕೋಲಾ ತಾಲ್ಲೂಕಿನ ಮಾಸ್ತಿಕಟ್ಟಿ ಬಳಿ ಕೃಷಿ ವಿಶ್ವವಿದ್ಯಾಲಯದ ಮಹಿಳಾ ಉದ್ಯೋಗಿಗಳು ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳದ ಕಾರ್ಯಕರ್ತರು ಇತ್ತೀಚೆಗೆ ಅಂಕೋಲಾ ತಾಲ್ಲೂಕಿನ ಮಾಸ್ತಿಕಟ್ಟಿ ಬಳಿ ಕೃಷಿ ವಿಶ್ವವಿದ್ಯಾಲಯದ ಮಹಿಳಾ ಉದ್ಯೋಗಿಗಳು ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು.   

ಧಾರವಾಡ: ಅಂಕೋಲಾ ತಾಲ್ಲೂಕಿನ ಮಾಸ್ತಿಕಟ್ಟಿ ಬಳಿ ಕೃಷಿ ವಿಶ್ವವಿದ್ಯಾಲಯದ ಮಹಿಳಾ ಉದ್ಯೋಗಿಗಳು ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಪದಾಧಿಕಾರಿಗಳು ಸೋಮವಾರ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಧರಣಿ ನಡೆಸಿದರು.

ವಿವಿಯ ಮಹಿಳಾ ಸಿಬ್ಬಂದಿ ಮೇಘಾ ಸಿಂಗನಾಥ ಮತ್ತು ರೇಖಾ ಕೊಕಟನೂರ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದರು. ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಬಿ.ಚಟ್ಟಿ ಅವರ ಆಪ್ತ ಸಹಾಯಕ ಮನ್ಸೂರ್ ಮುಲ್ಲಾ ತಮ್ಮ ಕಾರಿನಲ್ಲಿ ಈ ಉದ್ಯೋಗಿಗಳನ್ನು ಬೆದರಿಸಿ ಕರೆದುಕೊಂಡುಹೋಗಿದ್ದರು ಎಂಬ ಸಂಶಯವಿದೆ ಎಂದು ಧರಣಿ ನಿರತರು ದೂರಿದರು.

ಮನ್ಸೂರ್ ಮುಲ್ಲಾ ಅವರೊಂದಿಗೆ ಇಬ್ಬರೂ ಹೆಣ್ಣು ಮಕ್ಕಳು ತಮ್ಮ ಪಾಲಕರಿಗೆ ಬಾಗಲಕೋಟೆ ಕೃಷಿ ವಿ.ವಿ.ಯಲ್ಲಿ ಕೆಲಸವಿದೆ ಎಂದು ಸುಳ್ಳು ಹೇಳಿ ಹೋಗಿದ್ದರು. ಆದರೆ, ಗೋವಾದಿಂದ ಮರಳುವಾಗ ಅಂಕೋಲಾ ಬಳಿ ಅಪಘಾತದಲ್ಲಿ ಮೃತಪಟ್ಟಿರುವುದು ಮನೆಯವರಿಗೂ ಆತಂಕ ಮೂಡಿಸಿದೆ ಎಂದರು.

ADVERTISEMENT

ಅಪಘಾತದ ಹಿಂದಿನ ದಿನ ಕುಲಪತಿ ಎಂ.ಬಿ. ಚೆಟ್ಟಿ ಅವರು ದೆಹಲಿಯಿಂದ ಗೋವಾಕ್ಕೆ ಬಂದಿರುವ ಶಂಕೆ ಇದೆ. ಇದು ತನಿಖೆಯಿಂದ ಹೊರಬರಲಿದ್ದು, ಕುಲಪತಿ ಆಪ್ತ ಕಾರ್ಯದರ್ಶಿ ಮನ್ಸೂರ್ ಮುಲ್ಲಾ ಯಾವ ಉದ್ದೇಶದಿಂದ ವಿ.ವಿ.ಯ ಕಾರು ಬಳಕೆ ಮಾಡಲಿಲ್ಲ ಎಂಬ ಸಂಶಯ ಕಾಡುತ್ತಿದೆ. ಮೃತಪಟ್ಟಿರುವ ಮಹಿಳೆಯರ ಕುಟುಂಬ ಸದಸ್ಯರಿಗೆ ಪರಿಹಾರಾರ್ಥವಾಗಿ ವಿ.ವಿ.ಯಲ್ಲಿ ಉದ್ಯೋಗ ನೀಡಬೇಕು. ಮುಲ್ಲಾ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದುಆಗ್ರಹಿಸಿದರು.

‘ಕೃಷಿ ವಿ.ವಿ ವಾಹನವಲ್ಲ’
ಈ ಕುರಿತು ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಬಿ. ಚಟ್ಟಿ, ‘ನನ್ನ ಆಪ್ತ ಸಹಾಯಕ ಮನ್ಸೂರ್ ಮುಲ್ಲಾ ಹಾಗೂ ಇಬ್ಬರು ಮಹಿಳಾ ಸಿಬ್ಬಂದಿ ಅನ್ಯ ಕಾರ್ಯದ ಮೇರೆಗೆ ಗೋವಾಕ್ಕೆ ಹೋಗಿದ್ದರು. ವಿಶ್ವವಿದ್ಯಾಲಯದ ವಾಹನ ತೆಗೆದುಕೊಂಡು ಹೋಗಿರಲಿಲ್ಲ. ಅಪಘಾತ ಸಂಭವಿಸಿದ ದಿನ ಕಾರ್ಯದ ಮೇರೆಗೆ ನಾನು ಕೇರಳಕ್ಕೆ ಹೋಗಿದ್ದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.