ADVERTISEMENT

ಟಿಪ್ಪು ಸಮಾಧಿಗೆ ಪ್ರವಾಸಿಗರ ದಂಡು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:24 IST
Last Updated 9 ನವೆಂಬರ್ 2018, 20:24 IST
ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ಗೆ ಶುಕ್ರವಾರ ಭೇಟಿ ನೀಡಿದ ವಿದೇಶಿ ಪ್ರವಾಸಿಗರು
ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ಗೆ ಶುಕ್ರವಾರ ಭೇಟಿ ನೀಡಿದ ವಿದೇಶಿ ಪ್ರವಾಸಿಗರು   

ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ಪರ–ವಿರೋಧ ವ್ಯಕ್ತವಾಗುತ್ತಿದ್ದರೆ, ಇತ್ತ ಟಿಪ್ಪು ಕರ್ಮಭೂಮಿ ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್‌ ಬೇಸಿಗೆ ಅರಮನೆ, ಸಮಾಧಿ ಸ್ಥಳ ಗುಂಬಸ್‌, ಲಾಲ್‌ಮಹಲ್‌ ಅರಮನೆಗಳು ಪ್ರವಾಸಿಗರ ಪಾಲಿಗೆ ಆಕರ್ಷಣೀಯ ಕೇಂದ್ರಗಳಾಗಿವೆ. ಈ ತಾಣಗಳ ಬಗ್ಗೆ ಕುತೂಹಲ ಹೆಚ್ಚಿದ್ದು, ವಿವಾದಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಟಿಪ್ಪುವಿನ ಆಡಳಿತ, ಯುದ್ಧ ಮತ್ತು ಪ್ರಮುಖ ಸ್ಥಳಗಳ ನಿರ್ಮಾಣ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾವೇರಿ ನಡುಗಡ್ಡೆಯಲ್ಲಿರುವ ಟಿಪ್ಪು ಮತ್ತು ಆತನ ಪೋಷಕರ ಸಮಾಧಿಗೆ ಒಂದು ವಾರದಿಂದ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಬೇಸಿಗೆ ಅರಮನೆ ದರಿಯಾ ದೌಲತ್‌ಭಾಗ್‌ನಲ್ಲೂ ಪ್ರವಾಸಿಗರ ದಂಡು ಕಂಡು ಬರುತ್ತಿದೆ. ಶನಿವಾರ ಜಯಂತಿ ನಡೆಯಲಿದ್ದು, ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ADVERTISEMENT

‘ದಸರೆ ಮತ್ತು ದೀಪಾವಳಿ ರಜೆ ಕಾರಣ ಹೆಚ್ಚು ಜನರು ದರಿಯಾ ದೌಲತ್‌ಗೆ ಭೇಟಿ ನೀಡುತ್ತಿದ್ದಾರೆ. ನ.4ರಂದು 3,334, 5 ರಂದು 2,733, 6 ರಂದು 3,040, ನ. 7ರಂದು 3,093 ಹಾಗೂ ನ. 8ರಂದು 4,404 ಮಂದಿ ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ 375 ವಿದೇಶಿಗರು ಬಂದು ಹೋಗಿದ್ದಾರೆ’ ಎಂದು ದರಿಯಾ ದೌಲತ್‌ ಸ್ಮಾರಕದ ಅಧೀಕ್ಷಕ ಶ್ರೀಗುರು ಬಾಗಿ ಮಾಹಿತಿ ನೀಡಿದರು.

‘ಗುಂಬಸ್‌ಗೆ ವಾಡಿಕೆಯಂತೆ ಜನರು ಬಂದು ಹೋಗುತ್ತಿದ್ದಾರೆ. ಟಿಪ್ಪು ಜಯಂತಿ ಕಾರಣ ನ.10ರಂದು ಹೆಚ್ಚು ಜನರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ’ ಎಂದು ಟಿಪ್ಪು ವಕ್ಫ್‌ ಎಸ್ಟೇಟ್‌ ಕಾರ್ಯದರ್ಶಿ ಇರ್ಫಾನ್‌ ಮಹಮದ್‌ ತಿಳಿಸಿದರು.

ಪೊಲೀಸ್‌ ಸರ್ಪಗಾವಲು: ಟಿಪ್ಪು ಜಯಂತಿ ಕಾರಣ ಪಟ್ಟಣ ಹಾಗೂ ಆಸುಪಾಸಿನ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ‘ಬಂದೋಬಸ್ತ್‌ಗಾಗಿ ನಾಲ್ವರು ಡಿವೈಎಸ್‌ಪಿ, 12 ಸಿಪಿಐಗಳು, 20 ಎಸ್‌ಐಗಳು, 300 ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. 350 ಮಂದಿ ಗೃಹ ರಕ್ಷಕ ದಳದವರೂ ಇರುತ್ತಾರೆ’ ಎಂದು ಸಿಪಿಐ ಸಿ.ಎಂ.ರವೀಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.