ಬೆಂಗಳೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರ ದುರುಪಯೋಗ ಮಾಡುತ್ತಿದ್ದು, ಈ ಬಗ್ಗೆ ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ತಾವು ಪ್ರತಿನಿಧಿಸುವ ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯಲ್ಲಿ ಕೆಪಿಸಿಸಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಮತ ಕಳವು’ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದರು.
‘ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತ ಕಳವು ಬಗ್ಗೆ ಸಾಕ್ಷ್ಯ ಸಮೇತ ಬಹಿರಂಗಗೊಳಿಸಿದ್ದಾರೆ. ಅವರು ನೀಡಿರುವ ದಾಖಲೆಗಳಿಗೆ ಇದುವರೆಗೂ ಚುನಾವಣಾ ಆಯೋಗ ಗಂಭೀರವಾದ ಮತ್ತು ಸಮರ್ಪಕ ಉತ್ತರ ನೀಡಿಲ್ಲ’ ಎಂದು ಆರೋಪಿಸಿದರು.
‘ಕಳೆದ ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಕ್ಷೇತ್ರದಲ್ಲಿ ನಡೆದಿರುವ ಮತ ಕಳವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೇ ಮಾರಕ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಗೆ, ಕರ್ನಾಟಕದಲ್ಲಿ ಎಂದೂ ಜನಾದೇಶ ಸಿಕ್ಕಿಲ್ಲ. ಮತ ಕಳವು ಮೂಲಕವೇ ಅಧಿಕಾರಕ್ಕೆ ಬಂದಿದೆ’ ಎಂದು ಕಿಡಿ ಕಾರಿದ ಅವರು, ‘ಚುನಾವಣಾ ಆಯೋಗ ಮತ್ತು ಬಿಜೆಪಿಯ ಈ ಮತ ಕಳವು ವಿರುದ್ಧ ನಾವು ನಿರಂತರವಾಗಿ ಹೋರಾಟ ಹಮ್ಮಿಕೊಳ್ಳುತ್ತೇವೆ’ ಎಂದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ವಾಜೀದ್ ಮಾತನಾಡಿ, ‘ಜಾರ್ಜ್ ಅವರ ಸೂಚನೆಯಂತೆ ಕ್ಷೇತ್ರ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ಬೂತ್ ಮಟ್ಟದ ಸಮಿತಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ 35 ಸಾವಿರ ಜನರ ಸಹಿ ಸಂಗ್ರಹಿಸಿದ್ದಾರೆ. ಈ ಅಭಿಯಾನ ಮುಂದುವರಿಯಲಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ನಗರಪಾಲಿಕೆಗಳ ಚುನಾವಣೆಯಲ್ಲೂ ನಾವು ಪ್ರತಿ ಮತವನ್ನೂ ಗ್ಯಾರಂಟಿಗೊಳಿಸುತ್ತೇವೆ’ ಎಂದರು.
ಸಹಿ ಅಭಿಯಾನದಲ್ಲಿ ವಾರ್ಡ್‌ಗಳ ಅಧ್ಯಕ್ಷರಾದ ರಘು ದೇವರಾಜ್, ಪುಲಕೇಶಿ, ಸುಮಿತ್ರ, ಮುಖಂಡರಾದ ಮೋಹನ್ ಮೆನನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.