ADVERTISEMENT

ಬಿಹಾರ ಮಾದರಿಯಲ್ಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ಕರ್ನಾಟಕ ಸಜ್ಜು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 0:30 IST
Last Updated 18 ಸೆಪ್ಟೆಂಬರ್ 2025, 0:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಬಿಹಾರದ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯಲಿದೆ. ರಾಜ್ಯದ ಎಲ್ಲ ಮತದಾರರು ಎಸ್‌ಐಆರ್‌ಗೆ ಒಳಪಡಲಿದ್ದು, ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿ ಮತ್ತು ಮತಗಟ್ಟೆಗಳು ಬದಲಾಗಲಿವೆ.

ರಾಜ್ಯದಲ್ಲಿ ನಡೆಯಲಿರುವ ಎಸ್‌ಐಆರ್‌ ಕುರಿತಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಬುಧವಾರ ಪತ್ರಕರ್ತರಿಗೆ ಕಾರ್ಯಾಗಾರ ನಡೆಸಿತು. ಅಲ್ಲಿ, ಎಸ್ಐಆರ್‌ ಪ್ರಕ್ರಿಯೆಯ ವಿವರಗಳನ್ನು ಒದಗಿಸಿದೆ.

ADVERTISEMENT

‘ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಎಸ್‌ಐಆರ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳಿಗೆ ತರಬೇತಿ ಪೂರ್ಣಗೊಂಡಿದೆ. ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನಡೆಯುತ್ತಿದ್ದು, ಸೆಪ್ಟೆಂಬರ್ 25ರೊಳಗೆ ಪೂರ್ಣಗೊಳ್ಳಲಿದೆ. ಕೇಂದ್ರ ಚುನಾವಣೆ ಆಯೋಗ ಈ ಬಗ್ಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್‌ ತಿಳಿಸಿದರು.

‘2002ರಲ್ಲಿ ರಾಜ್ಯದಲ್ಲಿ ಎಸ್‌ಐಆರ್ ನಡೆದಿತ್ತು. 23 ವರ್ಷಗಳ ನಂತರ ಮತ್ತೆ ಎಸ್‌ಐಆರ್‌ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 2002ರ ಮತದಾರರ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಮತದಾರರು ಪ್ರಸ್ತುತ ಮತದಾರರ ಪಟ್ಟಿಯಲ್ಲಿದ್ದಾರೊ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಜಿಲ್ಲಾಧಿಕಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಒ) 2002ರ ಮತದಾರರ ಪಟ್ಟಿ ನೀಡಲಾಗಿದೆ. ಬಿಎಲ್‌ಒಗಳು ಮನೆ–ಮನೆಗೆ ಭೇಟಿ ಪರಿಶೀಲಿಸುತ್ತಾರೆ. ಎರಡೂ ಪಟ್ಟಿಯಲ್ಲಿ ಹೆಸರು ಇರುವವರಿಗೆ ಕ್ಯೂಆರ್‌ ಕೋಡ್‌ ಆಧಾರಿತ ಗಣತಿ ನಮೂನೆ (ಎನ್ಯುಮರೇಷನ್‌ ಫಾರ್ಮ್‌) ನೀಡಲಾಗುತ್ತದೆ. ಇದರಿಂದ ಅನರ್ಹ ಹಾಗೂ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಸಹಾಯವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ಮತದಾರನಿಗೆ ಸಂಬಂಧಿಸಿದ ಗಣತಿ ನಮೂನೆಯ ಎರಡು ಪ್ರತಿಗಳು ಬಿಎಲ್‌ಒಗಳು ಬಳಿ ಇರುತ್ತವೆ. ಎರಡು ಪ್ರತಿಗಳನ್ನು ಭರ್ತಿ ಮಾಡಿದ ನಂತರ ಒಂದಕ್ಕೆ ಬಿಎಲ್‌ಒ ಸಹಿ ಮಾಡಿ ಮತದಾರನಿಗೆ ನೀಡುತ್ತಾರೆ. ಮತ್ತೊಂದನ್ನು ಆಯೋಗಕ್ಕೆ ಸಲ್ಲಿಸುತ್ತಾರೆ. ಮನೆಯಲ್ಲಿ ಯಾರು ಇಲ್ಲದಿದ್ದರೆ, ಮೂರು ಬಾರಿ ಮನೆಗೆ ಭೇಟಿ ನೀಡಬೇಕು. ಜೊತೆಗೆ ಸ್ನೇಹಿತರ ಮೂಲಕ ಅವರನ್ನು ಸಂಪರ್ಕಿಸಿ, ಎಸ್‌ಐಆರ್‌ ಪ್ರಕ್ರಿಯೆ ನಡೆಸಬೇಕು. ಪತ್ರಿಕೆಗಳ ಮೂಲಕ ಸಹ ಈ ಬಗ್ಗೆ ಪ್ರಚಾರ ಮಾಡಲಿದೆ’ ಎಂದರು. 

‘ಎನ್ಯುಮರೇಷನ್‌ ಫಾರ್ಮ್‌ನಲ್ಲಿ ಮತದಾರರ ಗುರುತಿನ ಚೀಟಿಯ ಸಂಖ್ಯೆ, ವಿಳಾಸ, ಹೆಸರು ತಿದ್ದುಪಡಿ ಹಾಗೂ ವಿಳಾಸ ಬದಲಾವಣೆ, ಆಧಾರ್ ಸಂಖ್ಯೆಯನ್ನು ಸೇರಿಸಲು ಅವಕಾಶವಿದೆ. ಆಯೋಗ ಸೂಚಿಸಿರುವ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು’ ಎಂದು ವಿವರಿಸಿದರು.

2002ರಲ್ಲಿ ಎಸ್‌ಐಆರ್‌ ನಡೆದಿದ್ದರೂ ಆ ದಾಖಲೆಗಳನ್ನು ಡಿಜಿಟಲ್‌ ಸ್ವರೂಪಕ್ಕೆ ಪರಿವರ್ತಿಸಿಲ್ಲ. ಹೀಗಾಗಿ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಈಗ ಡಿಜಿಟಲ್‌ ಸ್ವರೂಪದಲ್ಲೂ ದಾಖಲೆ ಸಂಗ್ರಹಿಸಲಾಗುತ್ತದೆ
-ವಿ.ಅನ್ಬುಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

ಗರಿಷ್ಠ 90 ದಿನಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ: ಅನ್ಬುಕುಮಾರ್

  • ಎಸ್‌ಐಆರ್‌ ಪ್ರಕ್ರಿಯೆಯನ್ನು ಗರಿಷ್ಠ 90 ದಿನಗಳಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ

  • ಬಿಎಲ್‌ಒಗಳು ಮನೆ–ಮನೆಗೆ ಭೇಟಿ ನೀಡಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಿದ್ದಾರೆ. ಪ್ರತಿ ಮತಗಟ್ಟೆಗೆ ಏಜೆಂಟರನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ

  • ಗ್ರಾಮ ಪಂಚಾಯಿತಿ ನಗರ ಪ್ರದೇಶದ ವಾರ್ಡ್‌ಗಳಲ್ಲಿ ವೈಫೈ ಸವಲತ್ತು ಇರುವ ಶಿಬಿರ ಆರಂಭಿಸಿ ಎಸ್‌ಐಆರ್‌ ನಡೆಸಲಾಗುತ್ತದೆ. ಚುನಾವಣಾ ಆಯೋಗದ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ

  • ಅಂದಾಜು ಐದು ಕೋಟಿ ಮತದಾರರಿಗಾಗಿ 10 ಕೋಟಿಯಷ್ಟು ಎನ್ಯುಮರೇಷನ್‌ ಫಾರ್ಮ್‌ಗಳನ್ನು ಸಿದ್ಧಪಡಿಸಲಾಗಿದೆ

  • ಒಬ್ಬ ಮತದಾರರಿಗೆ ಸೇರಿದ ಹಲವು ಚೀಟಿಗಳು ಇದ್ದರೆ ಅವುಗಳ ವಿವರ ಶೇ 60ರಷ್ಟು ಹೊಂದಾಣಿಕೆಯಾದರೆ ಅದನ್ನು ತಂತ್ರಾಂಶದ ಮೂಲಕ ಪತ್ತೆ ಮಾಡಲಾಗುತ್ತದೆ. ಮಹಜರು ನಡೆಸಿ ಅವುಗಳನ್ನು ರದ್ದುಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ

  • ಬಿಎಲ್‌ಒಗಳಿಗೆ ಗೌರವಧನವನ್ನು ₹6000ದಿಂದ ₹12000ಕ್ಕೆ ಹೆಚ್ಚಿಸಲಾಗಿದೆ. ಎಸ್‌ಐಆರ್‌ನಲ್ಲಿ ಭಾಗಿಯಾಗುವವರಿಗೆ ಹೆಚ್ಚುವರಿಯಾಗಿ ₹6000 ನೀಡಲಾಗುತ್ತದೆ

  • ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಭಾಗಿಯಾಗಿರುವ ಸುಮಾರು 10000 ನಮೂನೆ 6 ನಮೂನೆ 7 ಮತ್ತು ನಮೂನೆ 8 ಅನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಅವು ವಿಲೇವಾರಿ ಆಗದಿದ್ದರೆ ಸಂಬಂಧಿತ ಮತದಾರರಿಗೆ ಎನ್ಯುಮರೇಷನ್‌ ಫಾರ್ಮ್‌ ಸೃಜಿಸಲಾಗುವುದಿಲ್ಲ

ಮೊದಲೇ ಸುದ್ದಿ ಪ್ರಕಟಿಸಿದ್ದ ‘ಪ್ರಜಾವಾಣಿ’
ರಾಜ್ಯದಲ್ಲಿ, ಬಿಹಾರ ಮಾದರಿಯಲ್ಲೇ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ ಎಂದು ಆಗಸ್ಟ್‌ 11ರ ಸಂಚಿಕೆಯಲ್ಲಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

‘ರಾಜ್ಯಗಳ ಅರ್ಧಕ್ಕಿಂತ ಹೆಚ್ಚು ಮತದಾರರು ದಾಖಲೆ ಸಲ್ಲಿಸಬೇಕಾಗಲಿಕ್ಕಿಲ್ಲ’

ನವದೆಹಲಿ: ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುಂದಾಗಿರುವ ಚುನಾವಣಾ ಆಯೋಗವು, ಪರಿಷ್ಕರಣೆ ವೇಳೆ ರಾಜ್ಯಗಳಲ್ಲಿನ ಅರ್ಧಕ್ಕಿಂತ ಹೆಚ್ಚು ಮತದಾರರು ಯಾವುದೇ ದಾಖಲೆಯನ್ನು ನೀಡಬೇಕಾಗಿಲ್ಲ ಎಂದು ಬುಧವಾರ ಹೇಳಿದೆ.

ಈ ಹಿಂದೆ, ವಿವಿಧ ರಾಜ್ಯಗಳಲ್ಲಿ ನಡೆದ ಎಸ್‌ಐಆರ್‌ ಬಳಿಕ ಸಿದ್ಧಪಡಿಸಲಾಗಿರುವ ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಪರಿಗಣಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಆಯೋಗ ಹೇಳಿದೆ.

ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ ಎಸ್‌ಐಆರ್‌ ನಡೆಸಲಾಗಿದೆ. ಮುಂದಿನ ಎಸ್‌ಐಆರ್‌ ವೇಳೆ, 2002 ಹಾಗೂ 2004ರ ನಡುವಿನ ಸಂಬಂಧಿಸಿದ ವರ್ಷವನ್ನೇ ಆಧಾರವನ್ನಾಗಿ ಪರಿಗಣಿಸಲಾಗುವುದು ಎಂದೂ ಆಯೋಗ ಸ್ಪಷ್ಟಪಡಿಸಿದೆ. 

ಈ ಹಿಂದಿನ ಎಸ್‌ಐಆರ್‌ ಬಳಿಕ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಈಗಾಗಲೇ ಸೂಚನೆ ನೀಡಲಾಗಿದೆ. ಕೆಲ ರಾಜ್ಯಗಳ ಸಿಇಒಗಳು ಇಂತಹ ಮತದಾರರ ಪಟ್ಟಿಯನ್ನು ಈಗಾಗಲೇ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.

ಬದಲಾಗಲಿದೆ ಮತಗಟ್ಟೆ, ವಿಭಾಗ
ಎಸ್‌ಐಆರ್‌ ಪ್ರಕ್ರಿಯೆಯ ಭಾಗವಾಗಿ ಮತಗಟ್ಟೆ, ವಿಭಾಗಗಳು ಬದಲಾಗಲಿವೆ. ಒಂದು ಕಟ್ಟಡ, ಒಂದು ಬೀದಿ, ಒಂದು ಮತಗಟ್ಟೆ ವಿಭಾಗದಲ್ಲಿ ವಾಸಿಸುತ್ತಿರುವ ಎಲ್ಲ ಮತದಾರರು ಒಂದೇ ಮತಗಟ್ಟೆ ಮತ್ತು ವಿಭಾಗಕ್ಕೆ ಒಳಪಡುವಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಒಂದು ಮತಗಟ್ಟೆಯಲ್ಲಿ 1,200ಕ್ಕಿಂತಲೂ ಹೆಚ್ಚು ಮತದಾರರು ಇರಬಾರದು. ಪ್ರತಿ ಮತಗಟ್ಟೆಗೆ 1,200 ಮತದಾರರನ್ನು ಮಿತಿಗೊಳಿಸಿ, ಹೊಸಮತಗಟ್ಟೆಗಳನ್ನು ರಚಿಸಲಾಗುತ್ತದೆ.
ತಿರಸ್ಕಾರಕ್ಕೂ ಅವಕಾಶ
ಆಯೋಗವು ಸೂಚಿಸಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ಅವರ ಗಣತಿ ನಮೂನೆ (ಎನ್ಯುಮರೇಷನ್‌ ಫಾರ್ಮ್‌) ತಿರಸ್ಕರಿಸಿ ಶಿಫಾರಸು ಮಾಡಲು ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಒ) ಅವಕಾಶವಿದೆ. ಗಣತಿ ನಮೂನೆ, ಘೋಷಣಾ ಪತ್ರದಲ್ಲಿ ಅವುಗಳನ್ನು ಶಿಫಾರಸು ಮಾಡಲಾಗಿದೆ ಅಥವಾ ಶಿಫಾರಸು ಮಾಡಲಾಗಿಲ್ಲ ಎಂದು ಬಿಎಲ್‌ಒ ಆಯ್ಕೆ ಮಾಡಬಹುದಾಗಿದೆ. ಆದರೆ ಬಿಎಲ್‌ಒಗಳು ಶಿಫಾರಸಿಗೆ ಅಗತ್ಯ ಕಾರಣಗಳನ್ನು ಒದಗಿಸಬೇಕು ಮತ್ತು ಇತರ ಕೆಲ ಮತದಾರರ ಸಹಿ ಪಡೆದು ಮಹಜರು ನಡೆಸಿರಬೇಕು. ಬಿಎಲ್‌ಒಯಿಂದ ಶಿಫಾರಸು ಆಗಿ ಬಂದ ಗಣತಿ ನಮೂನೆ ಮತ್ತು ಘೋಷಣಾ ಪತ್ರವನ್ನು ಅಂಗೀಕರಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ ಎಂದು ಆಯ್ಕೆ ಮಾಡುವ ಅಧಿಕಾರ ಮತದಾರರ ನೋಂದಣಾಧಿಕಾರಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.