ADVERTISEMENT

ಇಂಟರ್ನ್‌ಶಿಪ್‌ ನಿಗಾಕ್ಕೆ ವಿಚಕ್ಷಣಾ ದಳ: ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:49 IST
Last Updated 28 ಜನವರಿ 2026, 15:49 IST
ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್
ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್   

ಬೆಂಗಳೂರು: ‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಮೇಲೆ ನಿಗಾ ಇರಿಸಲು ಪ್ರತ್ಯೇಕ ವಿಚಕ್ಷಣಾ ದಳ ನೇಮಕ ಮಾಡುತ್ತೇವೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಎಸ್‌.ವಿದ್ಯಾಶಂಕರ್ ಹೇಳಿದರು.

ನಗರದ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ವಿಟಿಯು ವತಿಯಿಂದ, ‘ಕಾಲೇಜು ಇಂಟರ್ನ್‌ಶಿಪ್‌ ಸಂಯೋಜಕರರಿಗೆ ಇಂಟರ್ನ್‌ಶಿಪ್‌ ಅನುಷ್ಠಾನ ಕಾರ್ಯಾಗಾರ’ವನ್ನು ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಹಿಂದೆ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ಗೆ ಹಾಜರಾಗದೆಯೇ ನಕಲಿ ಪ್ರಮಾಣ ಪತ್ರ ಸಲ್ಲಿಸುತ್ತಿರುವುದು ಮತ್ತು ಕೆಲವು ಕಂಪನಿಗಳು ಇಂಟರ್ನ್‌ಶಿಪ್‌ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿರುವುದು ಪತ್ತೆಯಾಗಿತ್ತು. ಇವೆಲ್ಲಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ‘ಇಂಟರ್ನ್‌ಶಿಪ್‌ ಪೋರ್ಟಲ್‌’ ಆರಂಭಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಇಂಟರ್ನ್‌ಶಿಪ್‌ ವಿಚಕ್ಷಣಾ ದಳ ಸ್ಥಾಪಿಸುತ್ತೇವೆ’ ಎಂದರು.

ADVERTISEMENT

‘ಇಂಟರ್ನ್‌ಶಿಪ್‌ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲ ಕಂಪನಿಗಳಿಗೆ ವಿಚಕ್ಷಣಾ ದಳವು ಭೇಟಿ ನೀಡಿ, ಅಲ್ಲಿ ಅಗತ್ಯ ಮೂಲಸೌಕರ್ಯ ಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದೆ. ಜತೆಗೆ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‌ಗೆ ಹಾಜರಾಗುತ್ತಿದ್ದಾರೆಯೇ ಎಂಬುದನ್ನೂ ಪರಿಶೀಲಿಸಲಿದೆ. ಈ ಮೂಲಕ ಇಂಟರ್ನ್‌ಶಿಪ್‌ ಅನ್ನು ಪರಿಣಾಮಕಾರಿ ಆಗಿಸಲಿದ್ದೇವೆ’ ಎಂದು ಹೇಳಿದರು.

‘ಇಂಟರ್ನ್‌ಶಿಪ್‌ ಅವಧಿಯಲ್ಲಿ ವಿದ್ಯಾರ್ಥಿಗಳು ಆಯಾ ದಿನ ಕಲಿತಿದ್ದನ್ನು ತಮ್ಮ ದಿನಚರಿಯಲ್ಲಿ ನಮೂದಿಸಬೇಕು. ಈ ವೇಳೆ ಕೃತಕ ಬುದ್ಧಿಮತ್ತೆ ಬಳಕೆ ಕಂಡುಬಂದರೆ, ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.