ADVERTISEMENT

ಸುಂಟಿಕೊಪ್ಪ: ಉದ್ಘಾಟನೆಗೆ ಕಾಯುತ್ತಿದೆ ಉದ್ಯಾನ

ಹರದೂರು ಗ್ರಾ.ಪಂನಲ್ಲಿ ಅಭಿವೃದ್ಧಿ ಕಾಮಗಾರಿಗಳ ಸರಣಿ

ಸುನಿಲ್ ಎಂ.ಎಸ್.
Published 11 ನವೆಂಬರ್ 2020, 12:35 IST
Last Updated 11 ನವೆಂಬರ್ 2020, 12:35 IST
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಯ ಉದ್ಯಾನ
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಯ ಉದ್ಯಾನ   

ಸುಂಟಿಕೊಪ್ಪ: ಸಮೀಪದ ಹರದೂರು ಗ್ರಾಮ ಪಂಚಾಯಿತಿ ಎದುರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೂತನವಾಗಿ ಉದ್ಯಾನ ನಿರ್ಮಿಸಲಾಗಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.

ಕಳೆದ ಹಲವು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದ ಹರದೂರು ಗ್ರಾಮ ಪಂಚಾಯಿತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ₹ 3 ಲಕ್ಷ ವೆಚ್ಚದಲ್ಲಿ ಉದ್ಯಾನ, ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಬಣ್ಣ, ಸಿಬ್ಬಂದಿಗಳಿಗೆ ಪ್ರತ್ಯೇಕ ಕೊಠಡಿ ಕಾಮಗಾರಿಗಳು ನಡೆದಿವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಅವರು ಯೋಜನೆಗಳ ಅನುಷ್ಠಾನದಲ್ಲಿ ಶ್ರಮ ವಹಿಸಿದ್ದಾರೆ. ಇದಕ್ಕೆ ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.

ಗ್ರಾಮ ಪಂಚಾಯಿತಿ ಗೇಟಿನ ಒಳಭಾಗಕ್ಕೆ ಪ್ರವೇಶಿಸುತ್ತಿದ್ದಂತೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಕಲ್ಲುಹಾಸು, ವಿಶ್ರಾಂತಿ ಬೆಂಚುಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಇದೀಗ ಗ್ರಾಮ ಪಂಚಾಯಿತಿ ಆವರಣಕ್ಕೆ ಆಗಮಿಸುವುದಲ್ಲದೇ ಸ್ಥಳೀಯ ಆಡಳಿತದ ಮೇಲೂ ಆಸಕ್ತಿ ವಹಿಸುತ್ತಿದ್ದಾರೆ.

ADVERTISEMENT

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಹರದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಮಾದರಿಯ ಭಿನ್ನ ಹಾದಿಯನ್ನು ಹಿಡಿದಿದೆ. ವಾತಾವರಣ ಆಪ್ತವೆನಿಸುವಂತೆ ಇದೆ. ಗ್ರಾಮಸ್ಥರನ್ನು ಆಕರ್ಷಿಸಿ ತನ್ನತ್ತ ಸೆಳೆಯುತ್ತಿದೆ.

ಪಿಡಿಒ ಲೋಕೇಶ್ ಮಾತನಾಡಿ, ಗ್ರಾಮ ಪಂಚಾಯಿತಿಯ ಬಗ್ಗೆ ಬಹಳಷ್ಟು ಮಂದಿಗೆ ಕೀಳರಿಮೆ ಇದ್ದಿತ್ತು. ಇವೆಲ್ಲವನ್ನು ದೂರ ಮಾಡುವುದಕ್ಕಾಗಿ ಸಣ್ಣ ಪ್ರಯತ್ನ ಮಾಡಲಾಗಿದೆ. ಕಟ್ಟಡಕ್ಕೆ ಸುಣ್ಣ–ಬಣ್ಣ ಬಳಿಯುವ ಕೆಲಸ ನಡೆಯುತ್ತಿದ್ದು, ಇದಾದ ನಂತರ ಶಾಸಕರಿಂದ ಈ ಉದ್ಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪಂಚಾಯಿತಿಯ ಎಲ್ಲ ಸಿಬ್ಬಂದಿ ವರ್ಗ ಕೈಜೋಡಿಸಿದರಿಂದ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ಸಾಗಿವೆ ಎಂದು ಅವರು ಹೇಳಿದರು.

ಒಟ್ಟಾರೆಯಾಗಿ ಗ್ರಾಮ ಪಂಚಾಯಿತಿಯ ಕೆಲಸಕ್ಕೆ ಬರುವ ಜನರಿಗೆ ತಂಪಾದ ಮತ್ತು ಸುಂದರವಾದ ಉದ್ಯಾನ ನಿರ್ಮಾಣವಾಗಿದೆ. ಹರದೂರು ಗ್ರಾಮ ಪಂಚಾಯಿತಿ ಕಾರ್ಯ ಶ್ಲಾಘನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.