ADVERTISEMENT

ವಕ್ಫ್‌ ವಿವಾದ: ರಾಜ್ಯದ ಮಾಹಿತಿಗೆ ಜೆಪಿಸಿ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 0:30 IST
Last Updated 27 ಡಿಸೆಂಬರ್ 2024, 0:30 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಕರ್ನಾಟಕದಲ್ಲಿ ವಕ್ಫ್‌ ಭೂಮಿ ವಿವಾದದ ನಡುವೆಯೇ,  ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕರ್ನಾಟಕ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಅಧಿಕಾರಿಗಳು ಮಾಹಿತಿ ನೀಡಿದರು. ಈ ರಾಜ್ಯಗಳು ನೀಡಿದ ಮಾಹಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಮಿತಿಯು 15 ದಿನಗಳಲ್ಲಿ ವಿವರವಾದ ಉತ್ತರ ನೀಡುವಂತೆ ತಾಕೀತು ಮಾಡಿತು. 

ADVERTISEMENT

ವಕ್ಫ್ ಮಂಡಳಿಗಳು ಹಕ್ಕು ಸಾಧಿಸಿರುವ ಆಸ್ತಿಗಳು ಮತ್ತು ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳ ಅನಧಿಕೃತ ಸ್ವಾಧೀನದಲ್ಲಿರುವ ವಕ್ಫ್‌ ಆಸ್ತಿಗಳ ವಿವರ ಸಲ್ಲಿಸುವಂತೆ ವಿವಿಧ ರಾಜ್ಯಗಳಿಗೆ ಜೆಪಿಸಿ ಇತ್ತೀಚೆಗೆ ಸೂಚಿಸಿತ್ತು. ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌ ನೇತೃತ್ವದ ಸಮಿತಿಯು ರಾಜ್ಯಗಳ ಅಭಿಪ್ರಾಯಗಳನ್ನು ಆಲಿಸಿತು. ರಾಜ್ಯ ವಕ್ಫ್‌ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲಾನಿ ನೇತೃತ್ವದ ಅಧಿಕಾರಿಗಳ ತಂಡವು ವಿವರಗಳನ್ನು ಒದಗಿಸಿತು. ಸರ್ಕಾರಿ ಆಸ್ತಿಗಳನ್ನು ಗುರುತಿಸಲು ಮತ್ತು ಅತಿಕ್ರಮಣದಾರರಿಂದ ಅವುಗಳ ರಕ್ಷಣೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಮೋಸದ ವಹಿವಾಟುಗಳನ್ನು ತಡೆಗಟ್ಟಲು ರಾಜ್ಯಗಳಲ್ಲಿನ ಎಲ್ಲಾ ಆಸ್ತಿಗಳ ಡಿಜಿಟಲೀಕರಣ ಮತ್ತು ಆಧಾರ್ ಸೀಡಿಂಗ್ ಬಗ್ಗೆ ವಿವರ ನೀಡಿದರು. ರಾಜ್ಯದ ವಕ್ಫ್‌ ವಿವಾದದ ಬಗ್ಗೆಯೂ ಸಮಿತಿ ಮಾಹಿತಿ ಪಡೆಯಿತು. 

‘ಮೂರು ರಾಜ್ಯಗಳ ನಿಯೋಗಗಳು ನೀಡಿದ ಪ್ರತಿಕ್ರಿಯೆಗಳು ತೃಪ್ತಿಕರವಾಗಿಲ್ಲ. ಪ್ರತಿಕ್ರಿಯೆಗಳನ್ನು ಒದಗಿಸಲು ನಾವು ಅವರಿಗೆ 15 ದಿನಗಳ ಕಾಲಾವಕಾಶ ನೀಡಿದ್ದೇವೆ ಮತ್ತು ಅಗತ್ಯವಿದ್ದರೆ ಅವರನ್ನು ಮತ್ತೆ ಕರೆಯುತ್ತೇವೆ’ ಎಂದು ಜಗದಂಬಿಕಾ ಪಾಲ್‌ ಸುದ್ದಿಗಾರರಿಗೆ ತಿಳಿಸಿದರು. 

ವಕ್ಫ್ ಮಂಡಳಿಯು ರೈತರಿಗೆ ಸೇರಿದ 1,500 ಎಕರೆಗೂ ಅಧಿಕ ಭೂಮಿ ವಶಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಬಿಜೆಪಿ ನಾಯಕರು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ರಾಜ್ಯಕ್ಕೆ ಭೇಟಿ ನೀಡಿದ್ದ ಪಾಲ್‌ ಅವರು ರೈತರೊಂದಿಗೆ ಮಾತುಕತೆ ನಡೆಸಿದ್ದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ತಂಡವು ಜಿಲ್ಲೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಸಮಿತಿಗೆ ವರದಿ ಸಲ್ಲಿಸಿತ್ತು.  

‌2005-06ರ ಅವಧಿಯಲ್ಲಿ ವಿವಿಧ ರಾಜ್ಯಗಳ ವಕ್ಫ್ ಮಂಡಳಿಗಳು ಅನಧಿಕೃತ ಒತ್ತುವರಿ ಕುರಿತು ಸಾಚಾರ್ ಸಮಿತಿಗೆ ಮಾಹಿತಿ ನೀಡಿದ್ದವು.

ಇಂತಹ ಆಸ್ತಿಗಳು ದೆಹಲಿಯಲ್ಲಿ 316, ರಾಜಸ್ಥಾನದಲ್ಲಿ 60 ಮತ್ತು ಕರ್ನಾಟಕದಲ್ಲಿ 42, ಮಧ್ಯಪ್ರದೇಶದಲ್ಲಿ 53, ಉತ್ತರ ಪ್ರದೇಶದಲ್ಲಿ 60 ಹಾಗೂ ಒಡಿಶಾದಲ್ಲಿ 53  ಇರುವುದಾಗಿ ಸಾಚಾರ್ ಸಮಿತಿ  2005-06ರಲ್ಲಿ ವರದಿ ಸಲ್ಲಿಸಿರುವುದನ್ನು ಜಂಟಿ ಸಂಸದೀಯ ಸಮಿತಿಯು ಗಮನಿಸಿದೆ. ಈ ಎಲ್ಲ ಆರು ರಾಜ್ಯಗಳಿಂದ ನವೀಕೃತ ಮಾಹಿತಿಯನ್ನು ಪಡೆದಿದೆ. 

2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ತಿದ್ದುಪಡಿಯಾದ ಸೆಕ್ಷನ್ 40, ವಿವಾದಾತ್ಮಕ ಕಾನೂನುಗಳಲ್ಲಿ ಒಂದೆನಿಸಿದೆ. ಇದು ಯಾವುದೇ ಆಸ್ತಿ ವಕ್ಫ್‌ಗೆ ಸೇರಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗಳಿಗೆ ನೀಡಿದೆ.

ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ಯುಪಿಎ ಸರ್ಕಾರವು 2005ರಲ್ಲಿ ಸಾಚಾರ್ ಸಮಿತಿ ರಚಿಸಿತ್ತು. ಈ ಸಮಿತಿಯು 2006ರಲ್ಲಿ ತನ್ನ ವರದಿ ಸಲ್ಲಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.