ADVERTISEMENT

ನನಗೆ ಒಬ್ಬ ತಾಯಿ, ನಿನಗೆ ಎಷ್ಟು ತಾಯಿ: ಸಿದ್ದರಾಮಯ್ಯಗೆ ಹರಿಹಾಯ್ದ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 16:50 IST
Last Updated 29 ಆಗಸ್ಟ್ 2019, 16:50 IST
   

ಬೆಂಗಳೂರು: ‘ಮೊದಲಿಂದಲೂ ಒಂದೇ ಪಕ್ಷದಲ್ಲಿದ್ದೇನೆ. ಪಕ್ಷವೇ ನನಗೆ ತಾಯಿ ಇದ್ದಂತೆ. ಒಂದೇ ಪಕ್ಷದಲ್ಲೇ ಇರುವುದರಿಂದ ನನಗೆ ಒಬ್ಬಳೇ ತಾಯಿ. ನೀನು ಎಷ್ಟು ಪಕ್ಷದಲ್ಲಿದ್ದೆ, ನಿನಗೆ ಎಷ್ಟು ತಾಯಿ ಇದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಏಕ ವಚನದಲ್ಲೇ ಪ್ರಶ್ನಿಸಿದರು.

ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ತಮ್ಮ ವಿರುದ್ಧ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ದಡ್ಡ ಎನ್ನುವ ಸಿದ್ದರಾಮಯ್ಯ ಅವರೇ ಶತದಡ್ಡ. ರಾಜ್ಯದಲ್ಲಿ ಆಪರೇಷನ್‌ ಮತ್ತು ಪಕ್ಷದ ದ್ರೋಹದ ಜನಕನೇ ಸಿದ್ದರಾಮಯ್ಯ’ ಎಂದು ಹರಿಹಾಯ್ದರು.

‘ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಹೋಗಿದ್ದು ಏಕೆ. ಅದರ ಹಿಂದೆ ಅಧಿಕಾರದ ಆಸೆ ಅಲ್ಲದೆ ಬೇರೇನೂ ಇಲ್ಲ. ಕಾಂಗ್ರೆಸ್‌ ಸೇರಲು ಎಷ್ಟು ಹಣ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಹೇಳಬೇಕು. ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ್ದಕ್ಕಾಗಿ ಬಿಟ್ಟೆ ಎನ್ನುತ್ತಾರೆ. ವಾಸ್ತವ ಎಂದರೆ, ಪಕ್ಷ ದ್ರೋಹ ಮಾಡಿದ ಕಾರಣಕ್ಕೆ ಜೆಡಿಎಸ್‌ನವರು ಕಿತ್ತು ಹಾಕಿದರು’ ಎಂದು ಈಶ್ವರಪ್ಪ ಹೇಳಿದರು.

ADVERTISEMENT

‘ಮೊದಲಿಗೆ ಸರಿಯಾಗಿ ಒಂದು ಪಕ್ಷದಲ್ಲಿ ಇರಲು ಕಲಿತುಕೋ. ಶತದಡ್ಡನಾಗಿರುವ ನಾನು ಪ್ರಶ್ನೆ ಕೇಳೋದೇ ಹೀಗೆ. ನನ್ನನ್ನು ದಡ್ಡ, ಮಿದುಳು ಇಲ್ಲದವನು ಎಂದು ಕರೆಯುತ್ತಾರೆ. ಹೌದು ನಾನು ದಡ್ಡನಾದರೆ ಅವನು ಶತದಡ್ಡ. ನನಗೆ ಮಿದುಳು ಇಲ್ಲ ಎಂದರೆ ಅವನಿಗೆ ಬುರಡೆ ಇಲ್ಲ ಎನ್ನುತ್ತೇನೆ’ ಎಂದು ಲಘು ಮಾತಿನಲ್ಲೇ ಕುಟುಕಿದರು.

‘ಕುರುಬ ಸಮಾಜದ ಸ್ವಾಮೀಜಿಯ ಬಗ್ಗೆ ನನಗೆ ಗೌರವ ಇದೆ. ಸಿದ್ದರಾಮಯ್ಯ ಅವರ ಹಿಂದೆ ಕುರುಬರ ಸ್ವಾಮಿಜಿ ಬಿಟ್ಟರೆ ಬೇರೆ ಯಾವ ಸಮುದಾಯದ ಸ್ವಾಮೀಜಿಗಳು ಇದ್ದಾರೆ. ದಲಿತ ಸ್ವಾಮೀಜಿಗಳು ಅವರನ್ನು ಬೆಂಬಿಸುತ್ತಾರಾ. ಇವರು ಜಾತ್ಯತೀತರೊ, ಕೋಮುವಾದಿಯೊ’ ಎಂದು ಪ್ರಶ್ನಿಸಿದರು.

ಫೋನ್‌ ಕದ್ದಾಲಿಕೆ: ಬಿಜೆಪಿ ಸರ್ಕಾರದಿಂದಲೂ ಕದ್ದಾಲಿಕೆ ಆಗುತ್ತಿದೆ ಎಂಬ ಜೆಡಿಎಸ್‌ ಆರೋಪಕ್ಕೆ ಉತ್ತರಿಸಿದ ಅವರು, ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಈಗಾಗಲೇ ಸಿಬಿಐಗೆ ಒಪ್ಪಿಸಲಾಗಿದೆ. ಕದ್ದಾಲಿಕೆಯಲ್ಲಿ ಬಿಜೆಪಿಯವರ ಪಾತ್ರ ಇಲ್ಲ. ಕದ್ದಾಲಿಕೆ ಮಾಡಿಸಿದವರು ಜೈಲಿಗೆ ಹೋಗುತ್ತಾರೆ ಎಂದು ಈಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.