
ಬೆಂಗಳೂರು: ಪೂರೈಕೆಗೂ ಮೊದಲೇ ಕುಡಿಯುವ ನೀರಿನಲ್ಲಿರುವ ಮಾಲಿನ್ಯ ಪತ್ತೆಹಚ್ಚುವ ತಂತ್ರಜ್ಞಾನ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ.
ಈ ಕುರಿತಂತೆ ಸಿಂಗಪುರದ ‘ಝ್ವೀಕ್’ ಎಂಬ ತಂಡದ ಜೊತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಚರ್ಚೆ ನಡೆಸಿದರು.
ನೀರಿನಲ್ಲಿರುವ ಮಾಲಿನ್ಯ ಪತ್ತೆ ಮಾಡುವ ತಂತ್ರಜ್ಞಾನದ ಮೇಲೆ ‘ಝ್ವೀಕ್’ ಕೆಲಸ ಮಾಡುತ್ತಿದೆ. ನೀರಿನ ಸುರಕ್ಷತೆ ಮತ್ತು ಪರಿಸರದ ಮೇಲೆ ನಿಗಾ ವಹಿಸಲು ಸ್ವಯಂಚಾಲಿತ ಮತ್ತು ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಕುರಿತು ತಂಡದ ಜೊತೆ ಪ್ರಿಯಾಂಕ್ ಸಮಾಲೋಚನೆ ನಡೆಸಿದರು.
‘ರಾಜ್ಯದಲ್ಲಿ ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗೆ ಸಿಂಗಪುರ ತಂತ್ರಜ್ಞಾನ ಹೇಗೆ ಪ್ರಸ್ತುತ ಆಗಬಹುದು ಎನ್ನುವ ಕುರಿತು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಭಾಗಿತ್ವದಲ್ಲಿ ಮೌಲ್ಯಮಾಪನ ನಡೆಸಲಾಗುವುದು. ಜೊತೆಗೆ, ಹೊಸ ತಂತ್ರಜ್ಞಾನ ಅಳವಡಿಸುವ ಬಗ್ಗೆಯೂ ಅಧ್ಯಯನ ಮಾಡಲಾಗುವುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗುಣಮಟ್ಟದ ನೀರು ಪೂರೈಸಲು ಸರ್ಕಾರ ಬದ್ಧವಾಗಿದೆ’ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.