ADVERTISEMENT

ಬಾವಿ ಕೊರೆಸಿದ ‘ನೀರ್‌ ಸಾಬ್‌’

ಡಿ.ಬಿ, ನಾಗರಾಜ
Published 20 ಮೇ 2019, 5:28 IST
Last Updated 20 ಮೇ 2019, 5:28 IST
ದೇವರಹಿಪ್ಪರಗಿ ತಾಲ್ಲೂಕಿನ ಜಾಲವಾದ ಗ್ರಾಮದ ನಜೀರ್‌ಸಾಬ್‌ ಬಾವಿಕಟ್ಟಿ ಅವರ ಕೊಳವೆಬಾವಿ ಬಳಿ ನಿಂತಿರುವ ನೀರಿನ ಗಾಡಿಗಳ ಸಾಲು
ದೇವರಹಿಪ್ಪರಗಿ ತಾಲ್ಲೂಕಿನ ಜಾಲವಾದ ಗ್ರಾಮದ ನಜೀರ್‌ಸಾಬ್‌ ಬಾವಿಕಟ್ಟಿ ಅವರ ಕೊಳವೆಬಾವಿ ಬಳಿ ನಿಂತಿರುವ ನೀರಿನ ಗಾಡಿಗಳ ಸಾಲು   

ವಿಜಯಪುರ: ‘ನಮ್ಮೂರಿನ ಜನರ ನೀರಿನ ಸಂಕಟ ಹೇಳತೀರದು. ಇದರ ನಿವಾರಣೆಗಾಗಿಯೇ ಕೊಳವೆಬಾವಿ ಕೊರೆಸಿದೆ. ಬಾವಿಯಲ್ಲಿ ನೀರು ಬಂದರೆ ಯಾರೊಬ್ಬರಿಗೂ ಇಲ್ಲ ಎನ್ನದೇ ನೀರು ನೀಡಬೇಕು ಎಂಬ ಸಂಕಲ್ಪ ಮಾಡಿಕೊಂಡಿದ್ದೆ. ಅದರಂತೆ ವರ್ಷದಿಂದಲೂ ಉಚಿತವಾಗಿ ನೀರು ಕೊಡುತ್ತಿರುವೆ’ ಎನ್ನುತ್ತಾರೆ ದೇವರಹಿಪ್ಪರಗಿ ತಾಲ್ಲೂಕಿನ ಜಾಲವಾದದ ನಜೀರ್ ಬಾವಿಕಟ್ಟಿ.

‘ಮುಂಜಾನೆ 5ರಿಂದ 8, ಮುಸ್ಸಂಜೆ 5ರಿಂದ ರಾತ್ರಿ 10ರ ತನಕವೂ ಕೊಳವೆಬಾವಿ ಬಳಿ ಜನರ ಪಾಳಿ. ರಸ್ತೆ ಬದಿಯುದ್ದಕ್ಕೂ ನೀರು ಗಾಡಿಗಳ ಸರತಿ ಇರುತ್ತದೆ. ರೊಕ್ಕ ಕೊಟ್ಟು, ಟ್ಯಾಂಕರ್‌ಗೆ ನೀರು ತುಂಬಿಕೊಳ್ತೀವಿ ಅಂದ್ರೂ ಕೊಟ್ಟಿಲ್ಲ. ರೊಕ್ಕಕ್ಕೆ ನೀರು ಮಾರಲ್ಲ’ ಎಂದು ನಜೀರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಿಂಗಳಿಂದೀಚೆಗೆ ಗ್ರಾಮದ ಪರಮಾನಂದ ಹಂಗನಹಳ್ಳಿ ಸಹ ಬೋರ್‌ವೆಲ್‌ ಕೊರೆಸಿದ್ದು, ಗ್ರಾಮಸ್ಥರ ನೀರಿನ ದಾಹ ತೀರಿಸುತ್ತಿದ್ದಾರೆ. ಇದರಿಂದ ನಜೀರ್‌ಸಾಬ್‌ ಬೋರ್‌ವೆಲ್‌ ಮೇಲಿನ ಒತ್ತಡ ಕೊಂಚ ಕಡಿಮೆಯಾಗಿದೆ.

ADVERTISEMENT

‘ಎಷ್ಟು ಅಲೆದಾಡಿದರೂ ನೀರು ಸಿಗ್ತಿರಲಿಲ್ಲ. ನಜೀರ್‌ಸಾಬ್‌, ಪರಮಾನಂದ ಉಚಿತವಾಗಿ ನೀರು ಕೊಡ್ತಿರೋದು ನಮ್ಗ ಬಂಗಾರ ಸಿಕ್ದಂಗಾಗೈತಿ’ ಎನ್ನುತ್ತಾರೆ ಜಾಲವಾದದ ಜೆ.ಬಿ.ಜನಗೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.