ADVERTISEMENT

ಜಲಾವೃತ ಬೆಳಗಾವಿಯಲ್ಲಿ ಕುಡಿಯುವ ನೀರಿಗೆ ಪರದಾಟ!

ಮೂರು ದಿನಗಳಿಂದಲೂ ನೀರು ಪೂರೈಸಲಾಗದ ಸ್ಥಿತಿ

ಎಂ.ಮಹೇಶ
Published 8 ಆಗಸ್ಟ್ 2019, 6:56 IST
Last Updated 8 ಆಗಸ್ಟ್ 2019, 6:56 IST
ಬೆಳಗಾವಿಯ ಶಾಹೂನಗರದ ಮನೆಯೊಂದರಲ್ಲಿ ಗುರುವಾರ ಮಳೆ ನೀರು ಸಂಗ್ರಹಿಸಲು ಬಕೆಟ್‌ ಇಟ್ಟಿದ್ದರು– ಪ್ರಜಾವಾಣಿ ಚಿತ್ರ
ಬೆಳಗಾವಿಯ ಶಾಹೂನಗರದ ಮನೆಯೊಂದರಲ್ಲಿ ಗುರುವಾರ ಮಳೆ ನೀರು ಸಂಗ್ರಹಿಸಲು ಬಕೆಟ್‌ ಇಟ್ಟಿದ್ದರು– ಪ್ರಜಾವಾಣಿ ಚಿತ್ರ   

ಬೆಳಗಾವಿ: ಧಾರಾಕಾರ ಮಳೆಯಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿರುವ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಪಂಪ್‌ಹೌಸ್‌ಗಳನ್ನು ಚಾಲನೆ ಮಾಡಲಾಗದಂತಹ ಸನ್ನಿವೇಶ ಎದುರಾಗಿರುವುದು ಇದಕ್ಕೆ ಕಾರಣ.

ಇಲ್ಲಿ ಎರಡು ವಾರಗಳಿಂದಲೂ ಸತತವಾಗಿ ಮಳೆಯಾಗುತ್ತಿದೆ. ಪರಿಣಾಮ, ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯದಿಂದ ನೀರೆತ್ತುವ ಪಂಪ್‌ ಮತ್ತುಹುಕ್ಕೇರಿ ತಾಲ್ಲೂಕಿನ ಹಿಂಡಲಗಾ ಪಂಪ್‌ಹೌಸ್‌ಗಳು ಮುಳುಗಿವೆ. ಹೀಗಾಗಿ, 3 ದಿನಗಳಿಂದಲೂ ನಗರದಾದ್ಯಂತ ಕುಡಿಯುವ ನೀರು ಸರಬರಾಜಾಗಿಲ್ಲ. ಪರಿಣಾಮ, ನೀರಿನ ಕ್ಯಾನ್‌ಗಳಿಗೆ (ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್) ಬಹಳ ಬೇಡಿಕೆ ಬಂದಿದೆ. ಧಾರಾಕಾರ ಮಳೆಯಿಂದಾಗಿ, ಖಾಸಗಿ ಶುದ್ಧೀಕರಣ ಘಟಕಗಳು ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಕೆಲವೆಡೆ ಘಟಕಗಳಿಗೆ ನೀರು ನುಗ್ಗಿದ್ದು, ಸ್ಥಗಿತಗೊಂಡಿವೆ. ಗ್ರಾಮೀಣ ಪ್ರದೇಶದಲ್ಲೂ ನೀರಿಗೆ ತತ್ವಾರ ಎದುರಾಗಿದೆ.

ಮಳೆ ನೀರೇ ಆಧಾರ:ಕೆಲವು ಮನೆಗಳಲ್ಲಿ ಸಂಪ್‌ನಲ್ಲಿ ಸಂಗ್ರಹವಾಗಿರುವ ನೀರನ್ನು ದಿನನಿತ್ಯದ ಬಳಕೆ ಜೊತೆ ಕುಡಿಯುವುದಕ್ಕೂ ಬಳಸುತ್ತಿರುವುದು ಸಾಮಾನ್ಯವಾಗಿದೆ. ಕೆಲವರು, ಮಳೆ ನೀರನ್ನು ಬಕೆಟ್‌, ಡ್ರಮ್‌ಗಳಲ್ಲಿ ಸಂಗ್ರಹಿಸಿಕೊಂಡು ಅದನ್ನೇ ಬಳಸುತ್ತಿದ್ದಾರೆ. ಅದನ್ನೇ ಕಾಯಿಸಿ, ಆರಿಸಿ ಕುಡಿಯುವ ಅನಿವಾರ್ಯ. ನೀರು ಸರಬರಾಜಾಗದೇ 3 ದಿನಗಳಾಗುತ್ತಿರುವುದರಿಂದ ಸಂಪ್‌ನಲ್ಲಿನ ನೀರು ಕೂಡ ಖಾಲಿಯಾಗುವ ಹಂತ ತಲುಪಿದೆ. ಶೇ 70ರಷ್ಟು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ, ಸಂಪ್‌ನಲ್ಲಿನ ನೀರು ಬಳಸಲಾಗದ ಹಾಗೂ ಮೇಲಿನ ಟ್ಯಾಂಕ್‌ಗೆ ಪಂಪ್‌ ಮಾಡಲಾಗದ ಸ್ಥಿತಿ. ಜೊತೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವೂ ತೊಂದರೆಯಾಗಿ ಪರಿಣಮಿಸಿದೆ. ಹೀಗೆಯೇ ಮುಂದುವರಿದರೆ ಜೀವಜಲಕ್ಕಾಗಿ ಹಾಹಾಕಾರ ಉಂಟಾಗಲಿದೆ.

ADVERTISEMENT

‘ಕುಡಿಯುವ ನೀರಿಲ್ಲದೇ ಬಹಳ ತೊಂದರೆಯಾಗಿದೆ. ಸಂಪ್‌ನಲ್ಲಿರುವ ಅಲ್ಪಸ್ವಲ್ಪ ನೀರನ್ನೇ ಕಾಯಿಸಿಕೊಂಡು ಸೇವಿಸುತ್ತಿದ್ದೇವೆ. ಮನೆ ಮೇಲಿನ ಟ್ಯಾಂಕ್‌ ಮುಚ್ಚಳ ತೆಗೆದು ಮಳೆ ನೀರು ಸಂಗ್ರಹಿಸುತ್ತಿದ್ದೇವೆ. ಅದನ್ನೇ ದಿನನಿತ್ಯದ ಚುಟವಟಿಕೆಗಳಿಗೆ ಬಳಸುತ್ತಿದ್ದೇವೆ. ಎಷ್ಟೇ ಹಣ ಕೊಡುತ್ತೇವೆಂದರೂ ನೀರಿನ ಕ್ಯಾನ್‌ ದೊರೆಯುತ್ತಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ವಡಗಾವಿ ನಿವಾಸಿ ಕಿರಣ್‌ ಒತ್ತಾಯಿಸಿದರು.

‘ಧಾರಾಕಾರ ಮಳೆಯಿಂದಾಗಿ ನೀರು ಶುದ್ಧೀಕರಣ ಕಾರ್ಖಾನೆಗಳು ಬಂದ್ ಆಗಿವೆ. ಹೀಗಾಗಿ ನೀರಿನ ಕ್ಯಾನ್‌ಗಳು (ಪ್ಯಾಕೇಜ್ ವಾಟರ್‌) ಸಿಗುತ್ತಿಲ್ಲ. ಮೂರ್‍ನಾಲ್ಕು ದಿನಗಳ ಕಾಲ ಇದೇ ಸ್ಥಿತಿ ಮುಂದುವರಿಯಲಿದೆ’ ಎಂದು ಪೂರೈಕೆದಾರ ಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಗರಕ್ಕೆ ನಿತ್ಯ 12 ಎಂಜಿಡಿ (ಮಿಲಿಯನ್‌ ಗ್ಯಾಲನ್ ಪರ್‌ಡೇ) ನೀರು ಬೇಕಾಗುತ್ತದೆ. ಆದರೆ, ಎರಡೂ ಪಂಪ್‌ಹೌಸ್‌ಗಳು ಸಂಪೂರ್ಣ ಮುಳುಗಿರುವುದರಿಂದ ನೀರೆತ್ತಲು ಆಗುತ್ತಿಲ್ಲ. ರಕ್ಕಸಕೊಪ್ಪ ಜಲಾಶಯದ ಮೋಟರ್‌ ಬಿಚ್ಚಿಡಲಾಗಿದೆ. ಹಿಡಕಲ್ ಪಂಪ್‌ಹೌಸ್‌ ಒಳಗಡೆ ಹೋಗಲೂ ಆಗುತ್ತಿಲ್ಲ’ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್ಎಸ್‌ಬಿ) ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಎಲ್. ಚಂದ್ರಪ್ಪ ತಿಳಿಸಿದರು.

‘ಪಂಪ್‌ಹೌಸ್‌ನಲ್ಲಿ ಏನೇನು ಹಾನಿಯಾಗಿದೆ ಎನ್ನುವುದು ಮಳೆ ಕಡಿಮೆಯಾಗಿ, ನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾದ ನಂತರವಷ್ಟೇ ‍ಗೊತ್ತಾಗಲಿದೆ. ಟ್ಯಾಂಕರ್‌ ಮೂಲಕ ನೀರು ಕೊಡಬಹುದಾದರೂ ಚೆನ್ನಾಗಿರುವ ನೀರನ್ನು ಎಲ್ಲಿಂದ ತರುವುದು ಎನ್ನುವುದೇ ಪ್ರಶ್ನೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.