ADVERTISEMENT

ನಾವು ನಿಮ್ಮೊಂದಿಗಿದ್ದೇವೆ: ಮುಖ್ಯಮಂತ್ರಿ ಯಡಿಯೂರಪ್ಪಗೆ ಶಾಸಕರ ಅಭಯ

ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರ ಭೇಟಿ l ಯೋಗೇಶ್ವರ್‌ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2021, 19:19 IST
Last Updated 30 ಮೇ 2021, 19:19 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಸಚಿವ ಸಿ.ಪಿ.ಯೋಗೇಶ್ವರ್‌ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಬೆನ್ನಲ್ಲೆ, ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಕೆಲ ಬಿಜೆಪಿ ಶಾಸಕರು ಮುಖ್ಯಮಂತ್ರಿ ಅವರನ್ನು ಭಾನುವಾರ ಭೇಟಿ ಮಾಡಿ, ‘ನಾವು ನಿಮ್ಮೊಂದಿಗಿದ್ದೇವೆ’ ಎಂದು ಭರವಸೆ ನೀಡಿದ್ದಾರೆ.

ರೇಣುಕಾಚಾರ್ಯ ಜೊತೆಗೆ ರಾಜೂಗೌಡ, ಬಸವರಾಜ ದಡೆಸಗೂರು, ಬೆಳ್ಳಿ ಪ್ರಕಾಶ್, ನಿರಂಜನ ಕುಮಾರ್ ಸೇರಿ 10ಕ್ಕೂ ಹೆಚ್ಚು ಶಾಸಕರಿದ್ದರು. ಯಡಿಯೂರಪ್ಪ ವಿರೋಧಿ ಬಣದಿಂದ ತೆರೆಮರೆಯಲ್ಲಿ ಸಹಿ ಸಂಗ್ರಹಕ್ಕೆ ಯತ್ನ ನಡೆಯುತ್ತಿದೆ ಎನ್ನಲಾಗಿದ್ದು, ಈ ಬಗ್ಗೆ ಯಡಿಯೂರಪ್ಪ ಅವರ ಗಮನಕ್ಕೆ ತರಲು ಶಾಸಕರು ಭೇಟಿಯಾಗಿದ್ದರು ಎನ್ನಲಾಗಿದೆ.

ಬಳಿಕ ಮಾತನಾಡಿದ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ, ‘ಮುಖ್ಯಮಂತ್ರಿ ವಿರುದ್ಧ ಯಾರೋ ಒಬ್ಬಿಬ್ಬರು ಆಟ ಆಡಿದರೆ ಪ್ರಯೋಜನ ಆಗಲ್ಲ. ನಮ್ಮನ್ನು ವಿಜಯೇಂದ್ರ ಕಳುಹಿಸಿದ್ದಾರೆ ಎನ್ನಬಹುದು. ಆದರೆ, ನಮ್ಮನ್ನು ಯಾರೂ ಕಳುಹಿಸಿಲ್ಲ. ನಾವು ಪ್ರಾಮಾಣಿಕವಾಗಿ ಬಂದು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇವೆ’ ಎಂದರು.

ADVERTISEMENT

‘ಪಕ್ಷದ ವರಿಷ್ಠರು ಯಡಿಯೂರಪ್ಪನವರೇ ನಾಯಕರು ಎಂದು ಹೇಳಿದ್ದಾರೆ. ಯಾರೋ ಒಬ್ಬರು ಬೊಗಳುತ್ತಿದ್ದಾರೆ. ಅವರು ಬೊಗಳಿಕೊಂಡೇ ಇರಲಿ. ಸುಮ್ಮನೆ ದೆಹಲಿಗೆ ಹೋಗಿ ಗೇಟ್ ಮುಟ್ಟಿ ಬರಬೇಕು ಅಷ್ಟೇ. ಅವರಿಗೆ ದೆಹಲಿಯಲ್ಲೂ ಛೀಮಾರಿ ಹಾಕಿದ್ದಾರೆ’ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

‘ಯೋಗೇಶ್ವರ್ 2008ರಲ್ಲಿ ಬಿಜೆಪಿ ಚಿಹ್ನೆಯಲ್ಲಿ ಗೆದ್ದು, ಅರಣ್ಯ ಮಂತ್ರಿಯಾಗಿ ಲೂಟಿ ಹೊಡೆದರು. ಆ ಮೇಲೆ ಕಾಂಗ್ರೆಸ್ ಸೇರಿ, ಸೈಕಲ್ ಏರಿದರು. ಬಳಿಕ ಮತ್ತೆ ಬಿಜೆಪಿಗೆ ಬಂದರು. ಮೆಗಾ ಸಿಟಿ ಹಗರಣ ಮಾಡಿದರು. ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ನನ್ನ ವಿರುದ್ಧ ತೊಡೆ ತಟ್ಟಲಿ, ನಾನು ಎಲ್ಲವನ್ನೂ ಬಯಲಿಗೆಳೆಯುತ್ತೇನೆ. ಸೋತು ಸುಣ್ಣವಾಗಿದ್ದರೂ ಅವರನ್ನು ನಮ್ಮ ಪಕ್ಷ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ, ಸಚಿವರಾಗಿ ಮಾಡಿದೆ. ಅದನ್ನು ಯೋಗೇಶ್ವರ್ ಮರೆಯಬಾರದು’ ಎಂದರು.

ಕ್ಷೇತ್ರದಲ್ಲಿ ಕೆಲಸ ಮಾಡಿ: ‘ನೀವು ನಿಮ್ಮ ಕ್ಷೇತ್ರಗಳಿಗೆ ಹೋಗಿ ಕೆಲಸ ಮಾಡಿ. ಕೋವಿಡ್‌ ನಿಯಂತ್ರಣ ಮೊದಲ ಆದ್ಯತೆ ಆಗಿರಲಿ. ರಾಜಕಾರಣ ನಂತರ’ ಎಂದು ಯಡಿಯೂರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.