ADVERTISEMENT

ಹಳೆಯ ಪಿಂಚಣಿ ವ್ಯವಸ್ಥೆಗಾಗಿ ಹೋರಾಟ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ

‘ಎನ್‌ಪಿಎಸ್ ಒಪ್ಪುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 6:58 IST
Last Updated 22 ಸೆಪ್ಟೆಂಬರ್ 2019, 6:58 IST
ಸಿ.ಎಸ್. ಷಡಾಕ್ಷರಿ
ಸಿ.ಎಸ್. ಷಡಾಕ್ಷರಿ   

ಬೆಳಗಾವಿ: ‘ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ‘ಹೊಸ ಪಿಂಚಣಿ ಯೋಜನೆ’ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದೇವೆ. ಈ ಬಗ್ಗೆ ಚರ್ಚಿಸಲು ಸೆ. 27ರಂದು ವಿಧಾನಸೌಧದಲ್ಲಿ ಸಭೆ ನಡೆಯಲಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

‘ಹೋದ ವರ್ಷ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದ ವೇಳೆ ಸಂಘದ ಮನವಿ ಆಧರಿಸಿ, ಎನ್‌ಪಿಎಸ್‌ ರದ್ದತಿ ಬಗ್ಗೆ ಚರ್ಚಿಸಲು ಸಮಿತಿ ರಚಿಸಲಾಗಿತ್ತು. ಆದರೆ, ಸಭೆ ನಡೆದಿರಲಿಲ್ಲ. ಈಗ ನಮ್ಮ ಆಗ್ರಹದ ಮೇರೆಗೆ ಚರ್ಚಿಸಲಾಗುತ್ತಿದೆ. ಪರಿಹಾರ ಮಾರ್ಗಗಳ ಕುರಿತು ವರದಿ ಸಲ್ಲಿಸಲಾಗುವುದು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಭರವಸೆ:‘ರಾಜ್ಯದಲ್ಲಿ ಪಿಂಚಣಿ ಪಡೆಯುವ ನಿವೃತ್ತರು 1.20 ಲಕ್ಷ ಮಂದಿ ಇದ್ದಾರೆ. ಎನ್‌ಪಿಎಸ್‌ ಸಿಬ್ಬಂದಿಯನ್ನು ಹಳೆಯ ಪಿಂಚಣಿ ವ್ಯವಸ್ಥೆಯೊಂದಿಗೆ ವಿಲೀನಗೊಳಿಸಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹಳೆ ವ್ಯವಸ್ಥೆಗೆ ₹15ಸಾವಿರ ಕೋಟಿ ಬೇಕಾಗುತ್ತದೆ ಎಂದು ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಅಷ್ಟು ಬೇಕಿಲ್ಲ. ₹ 5ಸಾವಿರ ಕೋಟಿ ಸಾಕು. ಇದೆಲ್ಲವನ್ನೂ ಮನವರಿಕೆ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘2020ರ ಮೇ ತಿಂಗಳಲ್ಲಿ ಸಂಘವು ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಹೀಗಾಗಿ, ಬೆಂಗಳೂರಿನ ಕೇಂದ್ರ ಕಚೇರಿ ಆಧುನೀಕರಣಕ್ಕೆ ₹ 8 ಕೋಟಿ ದೊರೆತಿದ್ದು, ಕಾಮಗಾರಿ ಕೈಗೊಳ್ಳಲಾಗಿದೆ. ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು’ ಎಂದು ತಿಳಿಸಿದರು.

‘ಬೇರೆ ಊರುಗಳಿಂದ ಬರುವ ಸರ್ಕಾರಿ ನೌಕರರು ಬೆಳಿಗ್ಗೆ 10.30ರಿಂದಲೇ ವಿಧಾನಸೌಧ ಪ್ರವೇಶಿಸಲು ಅವಕಾಶ ಕೊಡಿಸಲಾಗಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಹಿಂದೆ ಮಧ್ಯಾಹ್ನ 3ರ ನಂತರ ಪ್ರವೇಸವಿತ್ತು’ ಎಂದರು.

ಸಮಾನವಾದ ವೇತನ ಕೊಡಬೇಕು:‘ರಾಜ್ಯದಲ್ಲಿ 5.40 ಲಕ್ಷ ನೌಕರರಿದ್ದೇವೆ. ತಮಿಳುನಾಡಿನಲ್ಲಿ 14 ಲಕ್ಷ ಇದ್ದಾರೆ. ಆದರೆ, ಅಭಿವೃದ್ಧಿಯಲ್ಲಿ ಕರ್ನಾಟಕ ಮುಂದಿದೆ. ಇದಕ್ಕೆ ನೌಕರರ ಶ್ರಮವೇ ಕಾರಣ. ವೇತನ ಕಡಿಮೆ ಇದ್ದರೂ ಅಭಿವೃದ್ಧಿಗೆ ತೊಡಕಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಹೀಗಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ಸಮನಾಗಿ ವೇತನ ಕೊಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ’ ಎಂದರು.

‘ಸಂಘದ ಉಪವಿಧಿ (ಬೈಲಾ)ಯಲ್ಲಿ ಬಹಳ ಗೊಂದಲಗಳಿವೆ. ಅದನ್ನು ತಿದ್ದುಪಡಿ ಮಾಡಲಾಗುವುದು. ನೌಕರರಿಗೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನಗದುರಹಿತವಾಗಿ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂಬ ಬೇಡಿಕೆಗೆ ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದಾರೆ. ಖಾಲಿ ಇರುವ 2.40 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕೆಜಿಐಡಿ ಕಚೇರಿಗಳನ್ನು ಗಣಕೀಕರಣಗೊಳಿಸುವ ಕಾರ್ಯ 3ರಿಂದ 5 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ. ನೌಕರರ ವಿರುದ್ಧ ಬರುವ ಆಧಾರರಹಿತ ದೂರು ಅರ್ಜಿಗಳನ್ನು ತನಿಖೆಗೆ ಒಳಪಡಿಸಬಾರದು ಎಂಬ ಮನವಿಗೆ ಸ್ಪಂದನೆ ದೊರೆತಿದೆ’ ಎಂದರು.

ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಶ್ರೀನಿವಾಸ, ಎಚ್‌.ಎಸ್. ಹೇಮಲತಾ, ರೋಷಣಿ, ಗೌರವಾಧ್ಯಕ್ಷ ವಿ.ವಿ. ಶಿವರುದ್ರಯ್ಯ, ಖಜಾಂಚಿ ಆರ್. ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.