ಬೆಂಗಳೂರು: ‘ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದರೆ ನಾವು ಕೈಕಟ್ಟಿ ಕೂರುವುದಿಲ್ಲ. ಮುಂದೆ ನಡೆಯಬಹುದಾದ ಘಟನೆಗಳಿಗೆ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸುವ ಯತ್ನದ ಪ್ರಕರಣವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಕೇವಲ ಬೆಳ್ತಂಗಡಿ ಮಾತ್ರವಲ್ಲ ರಾಜ್ಯದ ಹಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ದಬ್ಬಾಳಿಕೆ ನಡೆದಿದೆ. ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿದೆ. ಕೊಡಗಿನಲ್ಲಿ ಕಾರು ಹತ್ತಿಸಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ದಬ್ಬಾಳಿಕೆ ಹೆಚ್ಚಾಗಿದೆ. ದಬ್ಬಾಳಿಕೆಗೆ ಕಡಿವಾಣ ಹಾಕಲು ಪೊಲೀಸರಿಗೆ ಗೃಹ ಸಚಿವರು ಸೂಚಿಸಬೇಕು ಎಂದೂ ಒತ್ತಾಯಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬಂಧನ ಯತ್ನ ಖಂಡನೀಯ. ಯಾರಾದರೂ ಅಕ್ರಮ ಗಣಿಗಾರಿಕೆ ಮಾಡಿದ್ದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿ. ಆದರೆ, ವಿನಾ ಕಾರಣ ನಮ್ಮ ಪಕ್ಷದ ಯುವಮೋರ್ಚಾ ಕಾರ್ಯಕರ್ತ ಶಶಿಧರ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಶಾಸಕ ಹರೀಶ್ ಪೂಂಜಾ ಅವರು ಪೊಲೀಸ್ ಠಾಣೆಗೆ ಹೋಗಿ ಅದನ್ನು ಪ್ರಶ್ನಿಸಿದ್ದಾರೆ. ಅಮಾಯಕರನ್ನು ಬಂಧಿಸಿರುವುದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ನಮ್ಮ ಶಾಸಕರು ಪಕ್ಷದ ಕಾರ್ಯಕರ್ತರ ಪರ ನಿಲ್ಲುವುದು ತಪ್ಪೇ? ಕಾರ್ಯಕರ್ತನನ್ನು ಬಂಧಿಸಿದ್ದಕ್ಕೆ ಹೋರಾಟ ಮಾಡಿದಕ್ಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಹೋರಾಟವನ್ನು ಹತ್ತಿಕ್ಕಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದಾಗ ಹೋರಾಟ ಮಾಡಿಲ್ಲವೇ? ಆಡಳಿತ ಪಕ್ಷ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.