ADVERTISEMENT

19 ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:48 IST
Last Updated 6 ಅಕ್ಟೋಬರ್ 2021, 16:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿರುವುದರಿಂದ ಕರಾವಳಿ ಹಾಗೂ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 7ರಿಂದ 9ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಇದೇ 11ರವರೆಗೆ ಹೆಚ್ಚು ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಮುಂದುವರಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದ್ದು, ಕೆಲವೆಡೆ ಸಾಧಾರಣ ಮಳೆ ಸುರಿಯಲಿದೆ.

ಎಲ್ಲೆಲ್ಲಿ ಅಲರ್ಟ್‌?: ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಒಳನಾಡಿನ ತುಮಕೂರು, ಶಿವಮೊಗ್ಗ, ಕೋಲಾರ, ಕೊಡಗು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಯಾದಗಿರಿ, ರಾಯಚೂರು, ಕಲಬುರ್ಗಿ, ಹಾವೇರಿ, ಬೀದರ್, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ADVERTISEMENT

ಮಳೆ ಎಲ್ಲಿ, ಎಷ್ಟು?: ಉತ್ತರ ಕನ್ನಡ ಜಿಲ್ಲೆಯಜಗಲ್‌ಬೆಟ್ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಲಾ 8 ಸೆಂ.ಮೀ ಗರಿಷ್ಠ ಮಳೆಯಾಗಿದೆ.

ಮಂಗಳೂರು, ಅರಕಲಗೂಡು 6, ಕುಣಿಗಲ್ 5, ಗದಗ, ನೆಲಮಂಗಲ, ಭದ್ರಾವತಿ, ಬೆಂಗಳೂರು ನಗರ 4, ಬೆಳ್ತಂಗಡಿ, ಬೆಳಗಾವಿ, ಚಿಕ್ಕಮಗಳೂರು, ಮಾಗಡಿ, ಚಿಂತಾಮಣಿ, ಸಕಲೇಶಪುರ, ಗೌರಿಬಿದನೂರು, ಹೊಸಕೋಟೆ 3, ಪುತ್ತೂರು, ವಿಜಯಪುರ, ಶಿವಮೊಗ್ಗ, ಕೋಲಾರ, ಹಾಸನ, ಕೆ.ಆರ್.ಪೇಟೆ, ತಿಪಟೂರು, ಮಧುಗಿರಿ, ಮದ್ದೂರು, ಬೇಲೂರು 2, ಉಡುಪಿ, ಅಥಣಿ, ಕಡೂರು, ಶಿಡ್ಲಘಟ್ಟ, ಮಡಿಕೇರಿ, ಚಿತ್ರದುರ್ಗದಲ್ಲಿ ತಲಾ 1 ಸೆಂ.ಮೀ ಮಳೆ ಸುರಿದಿದೆ.

ಕಲಬುರ್ಗಿಯಲ್ಲಿ 33.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಬೀದರ್‌ನಲ್ಲಿ 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.