ADVERTISEMENT

ಈಗಲೇ ಏರುತ್ತಿದೆ ಬಿಸಿಲ ಝಳ

ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್‌ ತಾಪಮಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 20:15 IST
Last Updated 19 ಫೆಬ್ರುವರಿ 2019, 20:15 IST
   

ಬೆಂಗಳೂರು:ರಾಜ್ಯದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಒಣ ಹವೆಮುಂದುವರಿದಿದ್ದು, ಬಿಸಿಲ ಧಗೆಯ ಪ್ರಮಾಣ 36 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲಿನ ಪ್ರಮಾಣ ಅಧಿಕವಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಶಿವರಾತ್ರಿವರೆಗೂ ಚಳಿಗಾಲ ಮುಂದುವರಿಯಬೇಕಿತ್ತು. ಆದರೆ, ಫೆಬ್ರುವರಿ ಮಧ್ಯಭಾಗದಲ್ಲಿಯೇ ಚಳಿಗಾಲ ಕೊನೆಗೊಂಡಿದ್ದು, ದಿನಕಳೆದಂತೆ ಬಿಸಿಲಿನ ತೀವ್ರತೆ ಏರಿಕೆಯಾಗುತ್ತಿದೆ.

ADVERTISEMENT

ವಾಡಿಕೆಯಷ್ಟಿರಬೇಕಿದ್ದ ಗರಿಷ್ಠ ತಾಪಮಾನ, 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಕಂಡಿದ್ದು, ಹಲವೆಡೆ 36ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಬೆಳಗಾವಿ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಮಂಗಳವಾರ 12.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

‘ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಗಿನವರೆಗೆ ದಾಖಲಾದ ತಾಪಮಾನದ ಪ್ರಕಾರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆಯಲ್ಲಿ 34.5 ಹಾಗೂ ರಾಯಚೂರು, ರಾಮನಗರ, ತುಮಕೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ’ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಗಳವಾರ ಬೆಳಗಿನ ನಂತರ, ಸಾಕಷ್ಟು ಕಡೆ ಗರಿಷ್ಠ ತಾಪಮಾನ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಬಳ್ಳಾರಿ, ಕೊಪ್ಪಳ, ಕಲಬುರ್ಗಿ, ಕೋಲಾರ, ಮಂಡ್ಯದಲ್ಲಿ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ’ ಎಂದರು.

ವಾಡಿಕೆ ತಾಪಮಾನದ ಲೆಕ್ಕಾಚಾರದಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಬಳ್ಳಾರಿ ತಾಪಮಾನ ಒಂದು ಬಾರಿ ಮಾತ್ರ ಗರಿಷ್ಠ 40.3 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಈಗಿನ ಬಿಸಿಲು ಗಮನಿಸಿದರೆ ಹಿಂದಿನ ದಾಖಲೆ ಮುರಿಯಬಹುದು.

ಬೆಂಗಳೂರಿನ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇದ್ದ ಕಾರಣ ಮಂಗಳವಾರ ತಾಪಮಾನ ಅಷ್ಟೊಂದು ಏರಿಕೆ ಕಂಡಿರಲಿಲ್ಲ. 33ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಇತ್ತು. ಸೋಮವಾರ 36 ಡಿಗ್ರಿ ದಾಟಿತ್ತು.

2005ರ ಫೆಬ್ರವರಿ 17ರಂದು ಬೆಂಗಳೂರಿನಲ್ಲಿ 35.9 ಗರಿಷ್ಠ ತಾಪಮಾನ ದಾಖಲಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ 3 ಬಾರಿ ತಾಪಮಾನ ಈ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಹವಾಮಾನ ಇಲಾಖೆಯಿಂದತಾಪಮಾನ ಏರಿಕೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಬಗ್ಗೆ ವರದಿ ಸಿದ್ಧಪಡಿಸಿ, ಎಲ್ಲಾ ಜಿಲ್ಲಾಧಿಕಾರಿ, ಸಿಇಒ ಹಾಗೂ ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಲಾಗಿದೆ.

ಮಳೆ ಸಾಧ್ಯತೆ: ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ತಾಪಮಾನ ಏರಿಕೆ ಪರಿಣಾಮದಿಂದ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.