ಮಳೆ ( ಸಾಂಕೇತಿಕ ಚಿತ್ರ )
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶುಕ್ರವಾರವೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗೆ ‘ಆರೆಂಜ್ ಅಲರ್ಟ್ ’ ಹಾಗೂ ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಗಾಳಿಯು 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.
ಕರಾವಳಿ ಉದ್ದಕ್ಕೂ ಬಿರುಗಾಳಿಯಿಂದ ಕೂಡಿದ ಹವಾಮಾನ ಇರಲಿದೆ. ಗಂಟೆಗೆ 35 ಕಿ.ಮೀ.ದಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ಹೇಳಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವು 40 ಕಿ.ಮೀ ನಿಂದ 50 ಕಿ.ಮೀ. ತಲುಪುವ ಸಂಭವವಿದೆ ಎಂದು ತಿಳಿಸಿದೆ.
ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ (18 ಸೆಂ.ಮೀ), ಉಡುಪಿ ಜಿಲ್ಲೆಯ ಸಿದ್ದಾಪುರ (17 ಸೆಂ.ಮೀ), ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿ (14 ಸೆಂ.ಮೀ), ಕೊಟ್ಟಿಗೆಹಾರದಲ್ಲಿ (13 ಸೆಂ.ಮೀ) ಹೆಚ್ಚು ಮಳೆ ದಾಖಲಾಗಿದೆ. ಇದೇ ಪ್ರದೇಶದಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ.
ಆಗುಂಬೆ, ಸೋಮವಾರಪೇಟೆ, ಭಾಗಮಂಡಲ, ಕಳಸ, ಸಿದ್ದಾಪುರದಲ್ಲಿ ತಲಾ 11 ಸೆಂ.ಮೀ. ಮಳೆ ಸುರಿದಿದೆ. ಕೊಲ್ಲೂರು 10, ಯಲ್ಲಾಪುರ, ಗೇರುಸೊಪ್ಪ ತಲಾ 9, ಧರ್ಮಸ್ಥಳ, ಲೋಂಡಾ, ಕೊಪ್ಪದಲ್ಲಿ ತಲಾ 8 ಸೆಂ.ಮೀ. ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.