ADVERTISEMENT

ವಿಜಯೇಂದ್ರ ವಿರುದ್ಧ ಕ್ರಮ ಏನು: ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಮೇ 2021, 17:43 IST
Last Updated 25 ಮೇ 2021, 17:43 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವಿವರಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಲೆಟ್ಜ್‌ಕಿಟ್‌ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಒಬ್ಬ ವ್ಯಕ್ತಿಯ ಅನುಕೂಲಕ್ಕಾಗಿ ದೇವಾಲಯ ತೆರೆದು ಪೂಜೆ ನೆರವೇರಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಉಲ್ಲಂಘನೆಯಾಗಿದ್ದು, ಕ್ರಮ ಕೈಗೊಂಡಿರುವ ಬಗ್ಗೆ ಜೂ.3ರೊಳಗೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿತು.

ಬಿ.ವೈ.ವಿಜಯೇಂದ್ರ ಕುಟುಂಬ ಸಮೇತರಾಗಿ ಮೇ 18ರಂದು ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನಡೆಸಿದ್ದರು ಎಂದು ವಿಚಾರಣೆ ವೇಳೆ ವಕೀಲ ಜಿ.ಆರ್. ಮೋಹನ್ ಮೆಮೊ ಸಲ್ಲಿಸಿದರು.

ADVERTISEMENT

ಬೆಳಗಾವಿ ಸಮಾವೇಶ: ಅಸಮಾಧಾನ
ಕೋವಿಡ್‌ ನಿಯಮ ಉಲ್ಲಂಘಿಸಿ ಜನವರಿ 17ರಂದುಬೆಳಗಾವಿಯಲ್ಲಿ ನಡೆಸಿರುವ ಬಿಜೆಪಿ ಸಮಾವೇಶದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ತಪ್ಪಿತಸ್ಥರ ವಿರುದ್ಧ ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಸಲ್ಲಿಸಿದ್ದ ಪ್ರಮಾಣ ಪತ್ರ ಪರಿಶೀಲಿಸಿದ ಪೀಠ, ‍‘ಪೊಲೀಸ್ ಆಯುಕ್ತರಿಗೆ ಕಾಯ್ದೆಯ ಬಗ್ಗೆ ಅರಿವಿದ್ದಂತೆ ಕಾಣಿಸುತ್ತಿಲ್ಲ. ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ. ಕಾಯ್ದೆಯ ನಿಯಮಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಈ ಪ್ರಮಾಣ ಪತ್ರವನ್ನು ಒಪ್ಪಲು ಆಗುವುದಿಲ್ಲ. ಜೂ.3ರೊಳಗೆ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು’ ಎಂದು ತಿಳಿಸಿತು.

ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಈ ಹಿಂದೆ ನೀಡಿದ್ದ ಆದೇಶ ಪಾಲಿಸಿರುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಜೂ.4ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.