ADVERTISEMENT

ಯಾವ ಪುರುಷಾರ್ಥಕ್ಕೆ ಶಾಸಕರಾಗಿರಬೇಕು: ಶಾಸಕ ರಾಜು ಕಾಗೆ

ಸಚಿವರು ನಮ್ಮ ‌ಪತ್ರವನ್ನೇ ನೋಡುವುದಿಲ್ಲ- ಶಾಸಕ ರಾಜು ಕಾಗೆ ಮತ್ತೆ ಕಿಡಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:32 IST
Last Updated 24 ಜೂನ್ 2025, 15:32 IST
ಭರಮಗೌಡ (ರಾಜು) ಕಾಗೆ
ಭರಮಗೌಡ (ರಾಜು) ಕಾಗೆ   

ಬೆಂಗಳೂರು: ‘ಸಚಿವರು ಕೈಗೆ ಸಿಗುವುದಿಲ್ಲ. ಸಿಕ್ಕಿದಾಗ ನಮಸ್ಕಾರ ಮಾಡಿದರೆ, ಪ್ರತಿ ನಮಸ್ಕಾರ ಮಾಡುವುದಿಲ್ಲ. ನಮ್ಮ ‌ಪತ್ರವನ್ನು ಸರಿಯಾಗಿ ನೋಡುವುದಿಲ್ಲ. ಯಾವ ಪುರುಷಾರ್ಥಕ್ಕೆ ನಾವು ಶಾಸಕರಾಗಿ ಇರಬೇಕು’ ಎಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಮತ್ತೆ ಕಿಡಿಕಾರಿದ್ದಾರೆ.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ, ಸಚಿವರು ವಾರದಲ್ಲಿ ಒಂದು ದಿನವಾದರೂ ಶಾಸಕರಿಗೆ ಸಿಗಬೇಕು’ ಎಂದ ಅವರು, ‘2013–18ರವರೆಗೆ ಇದ್ದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಇಲ್ಲ. ಯಾಕೆಂದು ಗೊತ್ತಿಲ್ಲ’ ಎಂದರು.

‘ಶಾಸಕಾಂಗ ಪಕ್ಷದ ಸಭೆಯಲ್ಲಿ ನನ್ನ ನೋವು ತೋಡಿಕೊಂಡಿದ್ದೆ. ಆದರೆ, ಮುಖ್ಯಮಂತ್ರಿ, ಸಚಿವರು ನನ್ನ ಸಮಸ್ಯೆ ಏನೆಂದು ಕೇಳಿಲ್ಲ. ಅನುದಾನ ಕೊಟ್ಟಿಲ್ಲ. ಮುಖ್ಯಮಂತ್ರಿ ಕರೆದರೆ ಹೋಗಿ ಮಾತನಾಡುತ್ತೇನೆ. ನಾನು ಹಿರಿಯವನಿದ್ದೇನೆ. 30 ವರ್ಷಗಳಿಂದ ಶಾಸಕನಾಗಿದ್ದೇನೆ. ಹಿರಿಯ ಶಾಸಕರಿಗೆ ಹೀಗಾದರೆ ಹೊಸ ಶಾಸಕರಿಗೆ ಹೇಗೆ ಆಗಬೇಕು’ ಎಂದು ಪ್ರಶ್ನಿಸಿದರು.

ADVERTISEMENT

‘ಐಎಎಸ್‌ ಅಧಿಕಾರಿ ರಾಜೇಂದ್ರ ಕಟಾರಿಯಾ ನನಗೆ ಅಪಮಾನ ಮಾಡಿದ್ದರು. ಅವರ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ತಂದಿದ್ದೆ. ಚರ್ಚೆಯೂ ಆಗಿತ್ತು. ಆ ಅಧಿಕಾರಿಯನ್ನು ವರ್ಗಾವಣೆ ಮಾಡಲು 60 ಶಾಸಕರು ಮುಖ್ಯಮಂತ್ರಿಗೆ ಪತ್ರ ಕೊಟ್ಟಿದ್ದರು. ಆದರೆ, ಯಾವ ಕ್ರಮವೂ ಆಗಲಿಲ್ಲ. ಇಲ್ಲಿ ಅಧಿಕಾರಿ ಮುಖ್ಯವೊ, ಶಾಸಕರೊ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮಗೇನೂ ಮಾನ, ಮರ್ಯಾದೆ ಇಲ್ಲವೇ?’ ಎಂದೂ ಕಾಗೆ ಆಕ್ರೋಶ ವ್ಯಕ್ತಪಡಿಸಿದರು.

‘ಬಸವೇಶ್ವರ ನೀರಾವರಿ ಯೋಜನೆ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ 10 ಬಾರಿ ಹೇಳಿದ್ದೇನೆ. ಆದರೆ, ಏನೂ ಕ್ರಮ ಆಗಿಲ್ಲ’ ಎಂದೂ ಅಸಮಾಧಾನ ವ್ಯಕ್ತಪಡಿಸಿದರು. 

‘ಶಾಸಕರಿಗೆ ಸಮಯ ಕೊಡಲಿ’

‘ಶಾಸಕರಿಗೆ ಸಚಿವರು ಸಮಯ ಕೊಡಬೇಕು. ಅವರ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಕಾಂಗ್ರೆಸ್ ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಬಿ.ಆರ್. ಪಾಟೀಲರು ಹಿರಿಯ ಶಾಸಕರು. ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಆ ವಿಚಾರಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದು, ಚರ್ಚೆ ಮಾಡಬಹುದಿತ್ತು. ಮುಖ್ಯಮಂತ್ರಿ ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ಮಾತನಾಡಬೇಕಿತ್ತು’ ಎಂದರು.

‘ಪಾಟೀಲರ ಕ್ಷೇತ್ರಕ್ಕೆ ಹಣ ಮಂಜೂರಾತಿಗೂ ಮೊದಲು ಸಂಬಂಧಿಸಿದ ಸಚಿವರ ಗಮನಕ್ಕೆ ತರಬೇಕಿತ್ತು. ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಹೇಳುವುದು ಸರಿಯಲ್ಲ. ಆಡಳಿತ ವ್ಯವಸ್ಥೆ ಸರಿಯಾಗಿಯೇ ಇದೆ. ಶಾಸಕರಾದವರು ತಮ್ಮ ಅಧಿಕಾರ ಚಲಾಯಿಸಲು ಒಂದು ವ್ಯವಸ್ಥೆ ಇದೆ’ ಎಂದು ಹೇಳಿದರು.‌

‘ಅನುದಾನ ಸಿಗದಿದ್ದರೆ ಬೇಸರ ಸಹಜ’

‘ಅನುದಾನ ಸಿಗದಿದ್ದರೆ ಶಾಸಕರ ಬೇಸರ ಸಹಜ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕ್ಷೇತ್ರಗಳಿಗೆ ಅನುದಾನ ಬಂದಿಲ್ಲ ಎಂದು ಕೆಲವು ಶಾಸಕರು ಹೇಳಿರುವುದನ್ನು ನಾನು ಗಮನಿಸಿದ್ದೇನೆ’ ಎಂದರು.

‘ಸರ್ಕಾರದ ಬಳಿ ದುಡ್ಡಿಲ್ಲ’ ಎಂಬ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಪರಮೇಶ್ವರ, ‘ದುಡ್ಡಿಲ್ಲವೆಂದು ಯಾರು ಹೇಳಿದ್ದು? ನಾನು ತಮಾಷೆಗೆ ಹೇಳಿದ್ದೇನೆ ಅಷ್ಟೇ. ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟು ಇಲ್ಲ. ಹಣ ಬಿಡುಗಡೆ ಸ್ವಲ್ಪ ನಿಧಾನ ಆಗಿರಬಹುದು’ ಎಂದರು.‌

‘ಭ್ರಷ್ಟಾಚಾರಕ್ಕೆ ಕೌಂಟರ್‌ ತೆರೆದ ಸರ್ಕಾರ’

‘ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರಕ್ಕೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಸಚಿವಾಲಯದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೂ ಲಂಚವಿಲ್ಲದೆ ಯಾವ ಕೆಲಸವೂ ಆಗುತ್ತಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಕಮಿಷನ್‌ ಮಾಫಿಯಾಗೆ ಬೆಂಬಲ ನೀಡುತ್ತಿದೆ. ಕಮಿಷನ್ ಮಾಫಿಯಾವೇ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಏಕೈಕ ಕಾರಣಕ್ಕೆ ಸಿದ್ದರಾಮಯ್ಯನವರು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಆರೋಪಿಸಿದರು.

‘ಯಾಕ್ರೀ ಹೊಟ್ಟೆ ಉರಿಸ್ತೀರಿ. ನಿಮ್ಮ ರೇಟ್‌ ಲಿಸ್ಟ್‌ ಹಾಕಿ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ ಅವರು ಬಾದಾಮಿಯಲ್ಲಿ ‘ಸಿದ್ದರಾಮಯ್ಯ ಅವರ ಬಳಿ ಹಣವಿಲ್ಲ, ದಯವಿಟ್ಟು ಹಣ ಕೇಳಲು ಬರಬೇಡಿ’ ಎಂಬ ಸಂದೇಶವನ್ನು ಶಾಸಕರಿಗೆ ಪರೋಕ್ಷವಾಗಿ ಸಂದೇಶ ನೀಡಿದ್ದಾರೆ ಎಂದು ಟೀಕಿಸಿದರು.

ಲಂಚ ಸಂಗ್ರಹಕ್ಕೆ ಮುಖ್ಯಮಂತ್ರಿಗಳೇ ಹೊರಗುತ್ತಿಗೆ ನೀಡಿದ್ದಾರೆ. ಬಿ.ಆರ್. ಪಾಟೀಲರ ಆರೋಪದ ಬಳಿಕವೂ ವಸತಿ ಸಚಿವ ಜಮೀರ್‌ ಅಹಮದ್‌ ಅವರ ರಾಜೀನಾಮೆ ಪಡೆದಿಲ್ಲ. ರಾಜು ಕಾಗೆ, ಎನ್.ವೈ. ಗೋಪಾಲಕೃಷ್ಣ ಸೇರಿದಂತೆ ತಮ್ಮದೇ ಪಕ್ಷದ ಶಾಸಕರ ಆರೋಪಗಳ ಕುರಿತು ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.