ADVERTISEMENT

ಏನು ಸಮಸ್ಯೆಗಳು ಬರುತ್ತವೆ ಎಂದು ಗಮನಿಸದೇ ಹೋದರೆ ಪೊಲೀಸರ ಪ್ರಯೋಜನ ಏನು? ಪರಮೇಶ್ವರ

ವಿಶ್ಲೇಷಣೆ ಆಗದೇ ಮಹತ್ವ ತಿಳಿಯದು –ಪೊಲೀಸ್‌ ಅಧಿಕಾರಿಗಳ ಸಮಾವೇಶದಲ್ಲಿ ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:15 IST
Last Updated 28 ಜೂನ್ 2025, 16:15 IST
ನಗರದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರು ಮಾತನಾಡಿದರು      
ನಗರದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರು ಮಾತನಾಡಿದರು         

ಬೆಂಗಳೂರು: ‘ಪೊಲೀಸ್ ಇಲಾಖೆ ಹಲವು ತಂತ್ರಾಂಶಗಳನ್ನು ಅಳವಡಿಸಿಕೊಂಡಿದೆ. ಅವುಗಳ ಪ್ರಯೋಜನ ಬಗ್ಗೆ ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ರಾಜ್ಯ‌ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ಎರಡನೇ ದಿನವಾದ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ತಂತ್ರಾಂಶಗಳು ಎಷ್ಟರ ಮಟ್ಟಿಗೆ ಪ್ರಯೋಜನವಾಗಿವೆ ಎಂಬುದರ ವಿಶ್ಲೇಷಣೆ ಆಗಬೇಕು. ಅದನ್ನು ಕೈಗೊಳ್ಳದೆ ನಾವು ಅಳವಡಿಸಿಕೊಂಡಿರುವ ತಂತ್ರಾಂಶಗಳ ಮಹತ್ವ ಗೊತ್ತಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಮನೆ ಮನೆಗೆ ಪೊಲೀಸ್’ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಬೇಕಿದೆ. ಆಗ, ಕರ್ನಾಟಕ ಪೊಲೀಸ್ ಇಲಾಖೆಗೆ‌‌ ದೇಶದಲ್ಲಿ‌ಯೇ ಕೀರ್ತಿ ಬರುತ್ತದೆ’ ಎಂದು ಹೇಳಿದರು.

ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದ ರೂಪುರೇಷೆ ಬದಲಾಗಬೇಕು. ವಲಯ ಮಟ್ಟದಲ್ಲಿ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಯಲಿದೆ. ವಾರ್ಷಿಕ ಸಮಾವೇಶದಲ್ಲಿ ರಾಜ್ಯಮಟ್ಟದ ದತ್ತಾಂಶವನ್ನು ನೀಡಿದರೆ ಸಾಕು ಎಂದು ಹೇಳಿದರು.

ಸರ್ಕಾರ ಹಾಗೂ ಜನರ ಆಶಯದಂತೆ ಇಲಾಖೆ ಪರಿಣಾಮಕಾರಿಯಾಗಿ ಕೆಲಸ‌ ಮಾಡಬೇಕಿದೆ. ಜನರನ್ನು ಠಾಣೆಗಳಿಗೆ ಹತ್ತಾರು ಬಾರಿ ಅಲೆದಾಡಿಸದೆ ದೂರು ಸ್ವೀಕರಿಸಿ, ಜನಸ್ನೇಹಿಯಾಗಿ ಸ್ಪಂದಿಸಬೇಕು ಎಂದರು.

‘ಜಿಲ್ಲೆಗಳಲ್ಲಿ ಬೇರೆಬೇರೆ ರೀತಿಯ ಸಮಸ್ಯೆಗಳು ಇರುತ್ತವೆ. ಸಮಸ್ಯೆ ಪರಿಹರಿಸುವ ಕೆಲಸಗಳು ನಡೆಯಬೇಕು. ದ್ವೇಷ, ಕೋಮು ಸಂಘರ್ಷ ಇನ್ನಿತರ ವಿಚಾರಗಳು ಹೊರಬರುತ್ತವೆ, ಗಮನಿಸಬೇಕು’ ಎಂದು ಹೇಳಿದರು.

ಎಸ್‌.ಸಿ, ಎಸ್‌.ಟಿ,‌ ಮಹಿಳಾ ಮತ್ತು‌ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತಪ್ಪಿತಸ್ಥರಿಗೆ ಶಿಕ್ಷೆ ಪ್ರಮಾಣ ಕಡಿಮೆ ಇದೆ. ತನಿಖಾಧಿಕಾರಿಗಳು ಸರ್ಕಾರಿ ವಕೀಲರನ್ನು (ಪಬ್ಲಿಕ್‌ ಪ್ರಾಸಿಕ್ಯೂಟರ್) ಭೇಟಿ ಮಾಡಿ, ಚರ್ಚಿಸಿ ಸಲಹೆ ಪಡೆದುಕೊಳ್ಳಬೇಕು. ಆದರೆ, ಯಾವ ಅಧಿಕಾರಿಯೂ ಈ ನಿಯಮ ಪಾಲಿಸುತ್ತಿಲ್ಲ. ಈ ಒಂದು ಕಾರಣದಿಂದ ಆರೋಪಿಗಳು ಕಾನೂನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ತರಬೇತಿ ನೀಡಬೇಕು‌. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಂಭೀರವಾಗಿ ಆಲೋಚಿಸಿ, ಗಮನ ಹರಿಸಬೇಕಿದೆ ಎಂದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿ ಪ್ರಶಾಂತ್ ಕುಮಾರ್ ಠಾಕೂರ್, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಡಿಜಿ ಮಾಲಿನಿ ಕೃಷ್ಣಮೂರ್ತಿ, ಸಿಐಡಿ ಸೈಬರ್ ಕ್ರೈಂ ಮತ್ತು ಮಾದಕ ವಸ್ತು ವಿಭಾಗದ ಡಿಜಿ ಪ್ರಣವ್ ಮಹಾಂತಿ, ರಾಜ್ಯ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಪಾಲ್ಗೊಂಡಿದ್ದರು. 

––

ಗಣೇಶ ಹಬ್ಬ ಆಚರಣೆ ಮೊಹರಂ ಸೇರಿ ಇನ್ನಿತರ ಹಬ್ಬದ ಸಂದರ್ಭದಲ್ಲಿ ಏನೆಲ್ಲ ಸಮಸ್ಯೆಗಳು ಬರುತ್ತವೆ ಎಂದು ಗಮನಿಸದೇ ಹೋದರೆ ಪೊಲೀಸರ ಪ್ರಯೋಜನ ಏನಿದೆ?

–ಜಿ.ಪರಮೇಶ್ವರ ಗೃಹ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.