ADVERTISEMENT

ಪಿ.ಎಂ ಕೊಡುಗೆ ಏನು: ಸಿ.ಎಂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 19:12 IST
Last Updated 8 ಏಪ್ರಿಲ್ 2019, 19:12 IST

ಬೆಂಗಳೂರು: 'ಯುವಕರು ಮೋದಿ ಮೋದಿ ಎಂದು ಜಯಕಾರ ಕೂಗುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಏನು ಕೊಡುಗೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ಪರವಾಗಿ ಹೇರೋಹಳ್ಳಿ, ಹೆಗ್ಗನಹಳ್ಳಿ ಹಾಗೂ ಕುರುಬರಹಳ್ಳಿಯಲ್ಲಿ ಸೋಮವಾರ ಅವರು ಚುನಾವಣಾ ಪ್ರಚಾರ ನಡೆಸಿದರು.

‘ನೆಹರೂ,ಲಾಲ್‍ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ವಾಜಪೇಯಿ ಕಾಲದಲ್ಲಿ ದೇಶಕ್ಕೆ ರಕ್ಷಣೆ ಸಿಕ್ಕಿರಲಿಲ್ಲವೇ. ನರೇಂದ್ರ ಮೋದಿ ಮಾತ್ರ ದೇಶ ರಕ್ಷಣೆ ಮಾಡಿದ್ದಾರೆಯೇ. ಅತಿ ಸುಳ್ಳಿನ, ಭ್ರಷ್ಟ ಸರ್ಕಾರ ನಡೆಸುತ್ತಿರುವ ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ’ ಎಂದರು.

ADVERTISEMENT

‘ಮೋದಿ ಯಾವತ್ತೂ ಬಂದು ನಿಮ್ಮ ಕೆಲಸ ಮಾಡುವುದಿಲ್ಲ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸೋದು ನಾವು ಮಾತ್ರ. ಹೀಗಾಗಿ ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಅವರು ಮನವಿ ಮಾಡಿದರು. ‘ಎರಡೂ ಪಕ್ಷದ ನಾಯಕರು ಒಟ್ಟಿಗೆ ಕೆಲಸ ಮಾಡಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಸೂಚಿಸಿದರು.

‘ಬೆಂಗಳೂರನ್ನ ಲೂಟಿ ಮಾಡಿದ್ದು ಬಿಜೆಪಿ ನಾಯಕರು. ವ್ಯಾಪಕ ಭ್ರಷ್ಟಾಚಾರ ನಡೆಸಿದ್ದರಿಂದಲೇ ಬಿಬಿಎಂಪಿ ಕಡತಗಳು ಸಿಗಬಾರದೆಂದು ಅವುಗಳನ್ನು ರಾತ್ರೋರಾತ್ರಿ ಬೆಂಕಿ ಹಾಕಿ ಸುಟ್ಟರು. ಈಗ ರಾಜ್ಯದ ಬಿಜೆಪಿಅಭ್ಯರ್ಥಿಗಳೆಲ್ಲರೂ ಮೋದಿ ಮುಖ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಈ ಹಿಂದೆ ಯುಪಿಎ ಸರ್ಕಾರವು ಬೆಂಗಳೂರು ಅಭಿವೃದ್ಧಿಗೆಂದು ನೀಡಿದ್ದ ಸಾವಿರಾರು ಕೋಟಿ ಅನುದಾನವನ್ನು ಬಿ.ಎಸ್‌.ಯಡಿಯೂರಪ್ಪ ಮತ್ತು ಆರ್‌.ಅಶೋಕ್‌ ಲೂಟಿ ಮಾಡಿದರು’ ಎಂದೂ ಆರೋಪಿಸಿದರು.

‘ನಮ್ಮ ಸರ್ಕಾರ ಬೀಳಿಸಲು ಬಿಜೆಪಿಯವರು ಈಗ ಮೇ 23ರ ಗಡುವು ನೀಡಿದ್ದಾರೆ. ನಮ್ಮ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಜಿ.‍ಪರಮೇಶ್ವರ, ‘ಬಿಜೆಪಿ ಸಂಸದ ಡಿ.ವಿ. ಸದಾನಂದಗೌಡರು ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿಯೇ ಮೋದಿ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಮೋದಿ ಮುಖ ನೋಡಿ ಮತ ಹಾಕುವುದಾದರೆ ಅವರು ಯಾಕೆ ಇಲ್ಲಿಗೆ ಬೇಕು’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಸದಾನಂದಗೌಡರಿಗೂ, ಕೃಷ್ಣ ಬೈರೇಗೌಡರಿಗೂ ಅಜಾಗಜಾಂತರ ಇದೆ. ಕೃಷ್ಣ ಬೈರೇಗೌಡ ಕೆಲಸ ಮಾಡುವ ಮಂತ್ರಿ, ಸದಾನಂದಗೌಡ ನಿಷ್ಕ್ರಿಯ ಮಂತ್ರಿ. ಬೆಂಗಳೂರಿಗೆ ಮೋದಿ ಕೊಡುಗೆ ಶೂನ್ಯ. ಮನ್‌ ಕಿ ಬಾತ್‌ನಿಂದ ಬಡವರ ಹೊಟ್ಟೆ ತುಂಬುವುದಿಲ್ಲ’ ಎಂದರು.

**

ಮುಖ್ಯಮಂತ್ರಿ ಹುದ್ದೆಯಲ್ಲಿರಲು ಕನಿಷ್ಠ 6–7 ತಿಂಗಳು ಅವಕಾಶ ನೀಡಿ. ಅನೇಕ ಜನಪರ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಬೇಕಿದೆ.
ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.