ಶರಣ ಪ್ರಕಾಶ ಪಾಟೀಲ
ಬೆಂಗಳೂರು: ‘ತಮ್ಮ ಕ್ಷೇತ್ರಗಳಿಗೆ ಅನುದಾನ ಬೇಕೆಂದು ಶಾಸಕರು ಬೇಡಿಕೆ ಮಂಡಿಸಿದರೆ ತಪ್ಪೇನು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದು ಅಸಮಾಧಾನ ಅಥವಾ ಆಕ್ರೋಶ ಅಲ್ಲ. ಒಬ್ಬೊಬ್ಬರು ಒಂದೊಂದು ರೀತಿ ತಮ್ಮ ಅಹವಾಲು ಪ್ರಸ್ತುತಪಡಿಸಬಹುದು’ ಎಂದರು.
‘ಮನೆಯ ಯಜಮಾನನ ಮುಂದೆ ಅಳಲು ತೋಡಿಕೊಳ್ಳುವುದು ತಪ್ಪಾ? ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಹಜ. ನಮ್ಮದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಸತ್ತಾತ್ಮಕ ಆಡಳಿತ. ಇಲ್ಲಿ ಯಾರೇ ಆಗಲಿ ದನಿ ಎತ್ತಬಹುದು. ಬೇಡಿಕೆ ಮಂಡಿಸಬಹುದು. ಇದು ನರೇಂದ್ರ ಮೋದಿ ರೀತಿಯ ಸರ್ವಾಧಿಕಾರ ಆಡಳಿತ ಅಲ್ಲ’ ಎಂದರು.
‘ನಮ್ಮ ಸರ್ಕಾರದಲ್ಲಿ ಹಣದ ಕೊರೆತೆ ಇಲ್ಲ. ಬಿಜೆಪಿಯವರು ಸುಮ್ಮನೇ ಬೊಬ್ಬೆ ಹೊಡೆಯುತ್ತಿದ್ದಾರೆ. ಹಣ ಇಲ್ಲದೇ ಇದ್ದರೆ ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.
‘ಶಾಸಕರಾದವರಿಗೆ ಹೆಚ್ಚು ಕೆಲಸ ಮಾಡಬೇಕು ಅನಿಸುತ್ತೆ. ಮೊದಲ ಬಾರಿ ಶಾಸಕರಾದವರಿಗೆ ಇನ್ನೂ ಕೆಲಸ ಮಾಡಬೇಕು ಎಂಬ ಹಂಬಲ ಇರುತ್ತದೆ. ನಾನು ಮೊದಲ ಬಾರಿ ಶಾಸಕನಾದ ಇದೇ ಅನಿಸುತ್ತಿತ್ತು. ಶಾಸಕರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗಮನಹರಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.