ADVERTISEMENT

‘ಚುನಾವಣೆ ಬಂದಾಗ ಜಾತಿ ನೆನಪು’

ಎಚ್‌ಡಿಕೆ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 7:59 IST
Last Updated 12 ಅಕ್ಟೋಬರ್ 2020, 7:59 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಚುನಾವಣೆಗಳು ಬಂದಾಗ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಜಾತಿ ನೆನಪಾಗುತ್ತದೆ. ಚುನಾವಣೆಗಳಲ್ಲಿ ಜಾತಿ ಅಸ್ತ್ರ ಪ್ರಯೋಗಿಸಲು ಅವರು ಯತ್ನಿಸುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಸಿದ್ಧತೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯಾವ ಸಮುದಾಯವೂ ಒಬ್ಬನೇ ವ್ಯಕ್ತಿಯ ಹಿಂದೆ ಹೋಗುವುದಿಲ್ಲ. ಜಾತಿ ಕಾರ್ಡ್‌ ಫಲ ಕೊಡುವುದಿಲ್ಲ’ ಎಂದರು.

‘ಒಕ್ಕಲಿಗರು ಕುಮಾರಸ್ವಾಮಿ ಅಥವಾ ಇನ್ನೊಬ್ಬ ವ್ಯಕ್ತಿಯ ಜತೆಗೆ ಹೋಗುವುದಿಲ್ಲ. ಹಾಗಿದ್ದರೆ, ಮಂಡ್ಯದಲ್ಲಿ ಕುಮಾರಸ್ವಾಮಿ ಮಗನನ್ನು ಏಕೆ ಸೋಲಿಸಿದರು? ತುಮಕೂರಿನಲ್ಲಿ ದೇವೇಗೌಡರನ್ನು ಏಕೆ ಸೋಲಿಸಿದರು’ ಎಂದು ಪ್ರಶ್ನಿಸಿದರು.

ADVERTISEMENT

ಈ ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಸರಿಯಾದ ಅಭ್ಯರ್ಥಿಗಳೇ ಇಲ್ಲ. ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.‌

ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಚುನಾವಣೆಯಲ್ಲಿ ಜಾತಿ ಅಸ್ತ್ರ ಬಳಸುತ್ತಿರುವ ಕುರಿತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ವ್ಯಂಗ್ಯವಾಗಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ನಾನು ಯಾರನ್ನೂ ನಿಂದಿಸುವುದಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರು ಅನುಭವಿಸುತ್ತಾರೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಒಳ್ಳೆಯದು ಮಾಡಿದ್ದರೆ ದೇವರು ನನಗೆ ಒಳ್ಳೆಯದು ಮಾಡಲಿ’ ಎಂದರು.

ಚುನಾವಣೆಗೆ 59 ಮಂದಿ ವೀಕ್ಷಕರ ನೇಮಿಸಿರುವುದನ್ನು ಕುಮಾರಸ್ವಾಮಿ ಟೀಕಿಸಿರುವ ಕುರಿತು ಕೇಳಿದಾಗ, ‘ಅವರು ಅನುಭವಸ್ಥರು ಮತ್ತು ಹಿರಿಯರಿದ್ದಾರೆ. ಅವರ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ಚುನಾವಣೆ ಮಾಡಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.