ADVERTISEMENT

ಭ್ರಷ್ಟಾಚಾರದ ವೈರಸ್‌ಗೆ ಲಸಿಕೆ ಎಲ್ಲಿದೆ: ಸಿದ್ದರಾಮಯ್ಯ

ಮುಖ್ಯಮಂತ್ರಿಗೆ ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 19:30 IST
Last Updated 19 ಮಾರ್ಚ್ 2021, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕೊರೊನಾ ವೈರಸ್‌ಗೆ ಲಸಿಕೆ ಬಂದಿದೆ. ನಿಮ್ಮ ಸರ್ಕಾರಕ್ಕೆ ತಗುಲಿರುವ ಭ್ರಷ್ಟಾಚಾರದ ವೈರಸ್‌ಗೆ ಎಲ್ಲಿಂದ ಲಸಿಕೆ ತರುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಶುಕ್ರವಾರ ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಖರ್ಚು ಮಾಡಿದ್ದರೆ ಈಗ ಏಕೆ ಸೋಂಕು ಉಲ್ಬಣಗೊಳ್ಳುತ್ತಿತ್ತು. ಕೊರೊನಾ ನಿಯಂತ್ರಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ನಮ್ಮ ಆರೋಪಕ್ಕೆ ಸಾಕ್ಷಿ ನೀಡುವಂತಿದೆ ಮತ್ತೆ ಕೇಕೆ ಹಾಕುತ್ತಿರುವ ಕೊರೊನಾ ವೈರಸ್‌’ ಎಂದಿದ್ದಾರೆ.

‘ಕೊರೊನಾ ನಿಯಂತ್ರಣಕ್ಕೆ ₹ 5,372 ಕೋಟಿ ಖರ್ಚು ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಿದ್ದೀರಿ. ಆದರೆ, ಖರ್ಚಿನ ವಿವರ ಮಾತ್ರ ನೀಡಿಲ್ಲ. ಈಗಲಾದರೂ ಯಾವ ಉದ್ದೇಶಗಳಿಗೆ ಆ ಹಣ ವೆಚ್ಚ ಮಾಡಲಾಗಿದೆ ಎಂಬ ವಿವರವನ್ನು ಜನರ ಮುಂದಿಡಿ. ಎರಡನೆ ಅಲೆಯ ಸಂದರ್ಭದಲ್ಲಾದರೂ ಕೊರೊನಾವನ್ನು ಭ್ರಷ್ಟಾಚಾರಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಜನರ ಜೀವ ಉಳಿಸಿ’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಬಿಜೆಪಿ ಪ್ರತ್ಯುತ್ತರ: ಟ್ವಿಟರ್‌ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಘಟಕ, ‘ಮೋದಿ ಸರ್ಕಾರ ಲಸಿಕೆ ಕಂಡುಹಿಡಿದು 70ಕ್ಕೂ ಹೆಚ್ಚು ದೇಶಗಳಿಗೆ ಒದಗಿಸಿದೆ. ಆದರೆ, ಕಾಂಗ್ರೆಸ್‌ ನಾಯಕರ ಕೊಳಕು ಮನಸ್ಥಿತಿಗೆ ಲಸಿಕೆ ಶೋಧಿಸಲು ಸಾಧ್ಯವಿಲ್ಲ. ಆರು ದಶಕದಿಂದ ದೇಶದಲ್ಲಿ ಕಾಂಗ್ರೆಸ್‌ ನಡೆಸಿದ ಲೂಟಿಯ ಲೆಕ್ಕ ಕೇಳುವ ಧೈರ್ಯ ತೋರುವಿರಾ? ಲೆಕ್ಕ ಕೇಳುವುದಕ್ಕೆ ಗಾಂಧಿ ಕುಟುಂಬದ ಭಯವೆ’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.

‘₹ 1 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯವನ್ನು ಸಾಲದ ಶೂಲದ ಮೇಲೇರಿಸಿದ್ದು ನೀವೇ ಅಲ್ಲವೆ? ಟಾರ್ಚ್‌ ಬೆಳಕಿನಲ್ಲಿ ಬಜೆಟ್‌ ಮಂಡಿಸಿದ್ದ ವಲಸೆ ನಾಯಕ 2021ರಲ್ಲಿ ಲೆಕ್ಕ ಕೇಳುತ್ತಿರುವುದು ಹಾಸ್ಯಾಸ್ಪದ’ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.