ADVERTISEMENT

LIVE| ನಾಳೆ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ

ಬಿ.ಎಸ್‌ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಘೋಷಿಸಲಾಯಿತು.

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 17:09 IST
Last Updated 27 ಜುಲೈ 2021, 17:09 IST

ಹಾವೇರಿಯಲ್ಲಿ ಸಂಭ್ರಮ

ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಘೋಷಣೆಯಾದ ಹಿನ್ನೆಲೆಯಲ್ಲಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು

ಬಿಜೆಪಿ ಕಚೇರಿಯಲ್ಲಿ ಬೊಮ್ಮಾಯಿ

ಇಂದು ರಾತ್ರಿ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಿಯೋಜಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಮತ್ತು ಜಗನ್ನಾಥರಾವ್ ಜೋಶಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

ಉಡುಪಿ: ಬಿಜೆಪಿ ಸಂಭ್ರಮಾಚರಣೆ

ಉಡುಪಿ: ಬಸವರಾಜ ಬೊಮ್ಮಾಯಿ ನಿಯೋಜಿತ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ನಗರದ ಕ್ಲಾಕ್ ಟವರ್ ಬಳಿ ಮಂಗಳವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ ಬೊಮ್ಮಾಯಿ ಪರ ಘೋಷಣೆ ಕೂಗಿದರು.

ADVERTISEMENT

ಜಗನ್ನಾಥ ಭವನಕ್ಕೆ ಭೇಟಿ ಬೊಮ್ಮಾಯಿ

ರಾಜಭವನಕ್ಕೆ ಭೇಟಿ ನೀಡಿ ಹಕ್ಕು ಮಂಡಿಸಿದ ಬಳಿಕ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿದ ನಿಯೋಜಿತ ಮುಖ್ಯಮಂತ್ರಿ ಬೊಮ್ಮಾಯಿ

‘ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ‘

ರಾಜ್ಯಪಾಲರ ಭೇಟಿ ಬಳಿಕ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ–

ನನ್ನ ಗುರುಗಳಾದ ಯಡಿಯೂರಪ್ಪ ಅವರ ಆಶಿರ್ವಾದೊಂದಿಗೆ ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಚುನಾಯಿತನಾಗಿದ್ದೇನೆ. ಯಡಿಯೂರಪ್ಪ ಅವರು 40 ವರ್ಷ ಬಿಜೆಪಿಯನ್ನು ಬೆವರು ಸುರಿಸಿ ಕಟ್ಟಿದ್ದಾರೆ. ಪಕ್ಷಕ್ಕೆ ತನ್ನದೇ ಆದ ಪರಂಪರೆಗಳಳಿವೆ. ಯಡಿಯೂರಪ್ಪ ಅವರ ತ್ಯಾಗಮಯ ನಿರ್ಣಯದಿಂದ ಎರಡು ವರ್ಷ ಕಷ್ಟದ ಪರಿಸ್ಥಿತಿಯಲ್ಲಿ ಎರಡು ಬಾರಿ ಕೋವಿಡ್‌. ಎರಡು ಬಾರಿ ಪ್ರವಾಹ ಎದುರಿಸಿ ರಾಜ್ಯವನ್ನು ಮುನ್ನಡೆಸಿದ್ದಾರೆ. ಹಣಕಾಸಿನ ಕೊರತೆ ಆಗದಂತೆ ಹಣಕಾಸು ನಿರ್ವಹಣೆ ಮಾಡಿದ್ದಾರೆ.

ನನ್ನ ಆಯ್ಕೆಯ ಬಗ್ಗೆ ರಾಜ್ಯಪಾಲರಿಗೆ ತಿಳಿಸಲಾಗಿದೆ. ಅವರು ಸರ್ಕಾರ  ರಚಿಸಲು ಆಹ್ವಾನ ಕೊಟ್ಟಿದ್ದಾರೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸುತ್ತೇನೆ. ನಾನು ಒಬ್ಬನೇ ಪ್ರಮಾಣ ವನಚ ಸ್ವೀಕರಿಸುತ್ತೇನೆ.

ರಾಜಭವನದಲ್ಲಿ ನಾಳೆ ಬೆಳಿಗ್ಗೆ ಬೊಮ್ಮಾಯಿ ಪ್ರಮಾಣ ವಚನ

ನಾಳೆ ಬೆಳಿಗ್ಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅಧಿಕೃತ ಆಹ್ವಾನ ನೀಡಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ; ಬಿಜೆಪಿ ಶಾಸಕರ ಅಭಿಪ್ರಾಯ

ಕೇಂದ್ರ ವರಿಷ್ಠ ಮಂಡಳಿಯ ತೀರ್ಮಾನಕ್ಕೆ ಬದ್ಧ. ಎಲ್ಲರ ವಿಶ್ವಾಸ ತೆಗೆದುಕೊಂಡು ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್‌ ಆಯ್ಕೆ ಮಾಡಿದೆ. ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ನಾವೆಲ್ಲ ಕೂಡಿ ಕೆಲಸ ಮಾಡುತ್ತೇವೆ. ಅವರ ಆಯ್ಕೆಗೆ ಸಹಮತಿ ಇದ್ದೇ ಇದೆ.

- ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್


ಹೈಕಮಾಂಡ್‌ ಒಳ್ಳೆಯ ತೀರ್ಮಾನ ತೆಗೆದುಕೊಂಡಿದೆ. ನನಗೆ ಖುಷಿ ಆಗಿದೆ. ಬಸವರಾಜ ಬೊಮ್ಮಾಯಿ ಒಳ್ಳೆಯ ವ್ಯಕ್ತಿ. ಅನುಭವಿ.

-ಅರವಿಂದ ಬೆಲ್ಲದ್‌

* ಬಸವರಾಜ ಬೊಮ್ಮಾಯಿ ಹುಷಾರ್‌ ಮುನಷ್ಯ, ಎಲ್ಲರಿಗೂ ಸಾಥ್‌ ಕೊಟ್ಟಿದ್ದಾರೆ.

– ಪ್ರಭು ಚವ್ಹಾಣ

*  ಪಕ್ಷದ ನಾಯಕರಾಗಿ ಬಸವರಾಜ ಬೊಮ್ಮಾಯಿ ಅನುಭವಿ ರಾಜಕಾರಣಿ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಆಯ್ಕೆ. ಒಳ್ಳೆಯ ತೀರ್ಮಾನ, ಇದನ್ನು ಸ್ವಾಗತಿಸುತ್ತೇನೆ.

–ವಿ. ಸೋಮಣ್ಣ

* ಬವರಾಜ ಬೊಮ್ಮಾಯಿ ಹಿರಿಯ ಅನುಭವಿ ರಾಜಕಾರಣಿ. ಅವರ ಆಯ್ಕೆ ಎಲ್ಲರ ಸರ್ವಸಮ್ಮತದ ತೀರ್ಮಾನ.

–ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್ ಕಟೀಲ್‌

ತಮ್ಮ ಸಿ.ಎಂ ಆಗುತ್ತಾನೆಂಬ ನಂಬಿಕೆ ಇತ್ತು: ಬೊಮ್ಮಾಯಿ ಅಕ್ಕ ಉಮಾ ಪಾಟೀಲ

ಹುಬ್ಬಳ್ಳಿ: ನನ್ನ ತಮ್ಮ ಇಂದಲ್ಲ ನಾಳೆ, ಕರ್ನಾಟಕದ ಮುಖ್ಯಮಂತ್ರಿ ಆಗುತ್ತಾನೆ ಎಂಬ ನಂಬಿಕೆ ಇತ್ತು. ಅದರಂತೆ, ಇಂದು ಸಿ.ಎಂ ಆಗಿ ಆಯ್ಕೆಯಾಗಿದ್ದಾನೆ ಎಂದು ಬಸವರಾಜ ಬೊಮ್ಮಾಯಿ ಅವರ ಅಕ್ಕ ಉಮಾ ಪಾಟೀಲ ಅವರು ಸಂತಸ ವ್ಯಕ್ತಪಡಿಸಿದರು.

ಬಿಜೆಪಿಗೆ ಪಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ: ರಂಭಾಪುರಿ ಶ್ರೀ

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ಅವರ ಪದಚ್ಯುತಿಯಿಂದ ಬಿಜೆಪಿಗೆ ಮುಂದಿನ ದಿನಗಳಲ್ಲಿ ಬಹಳಷ್ಟು ಪೆಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೊಮ್ಮಾಯಿ ಹೆಸರು ಸೂಚಿಸಿದ ಬಿಎಸ್‌ವೈ

ಬುಧವಾರ ಬೆಳಿಗ್ಗೆಯೇ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರಿಸಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಗೋವಿಂದ ಕಾರಜೋಳ ಅವರು ಬೊಮ್ಮಾಯಿ ಹೆಸರು ಸೂಚಿಸಿದರು. ಸಭೆಯಲ್ಲಿ ಅಧಿಕೃತ ಒಪ್ಪಿಗೆ ದೊರೆತಿಯಿತು. ರಾಜ್ಯಪಾಲರ ಭೇಟಿಗಾಗಿ ಬಸವರಾಜ ಬೊಮ್ಮಾಯಿ ರಾಜಭವನಕ್ಕೆ ಹೊರಟರು.

ಯಡಿಯೂರಪ್ಪ ಅವರು ಬೊಮ್ಮಾಯಿ ಅವರು ಹೆಸರು ಸೂಚಿಸಿದ್ದರು. ಕಾರಜೋಳ, ಅಶೋಕ, ಈಶ್ವರಪ್ಪ, ಪೂರ್ಣಿಮಾ ಅವರು ಶಾಸಕಾಂಗ ಸಭೆಯಲ್ಲಿ ಅನುಮೋದನೆ ನೀಡಿದರು.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೊಮ್ಮಾಯಿ–ಮೊದಲ ಪ್ರತಿಕ್ರಿಯೆ

ರಾಜ್ಯದ ಜನ ಬಿಜೆಪಿ ಮೇಲೆ ವಿಶ್ವಾಸ, ನಿರೀಕ್ಷೆ ಇಟ್ಟಿದ್ದಾರೆ. ಪಕ್ಷದ ನಾಯಕರಾದ ಮೋದಿ, ಅಮಿತ್ ಶಾ, ಯಡಿಯೂರಪ್ಪ ನಿರೀಕ್ಷೆ ಇಟ್ಟಿದ್ದಾರೆ ಅದನ್ನು ಈಡೇರಿಸುತ್ತೇನೆ. ಜನರಿಗೋಸ್ಕರ ಜನಪರ ಆಡಳಿತ ನೀಡಿ, ಕರ್ನಾಟಕವನ್ನು ಉನ್ನತ ಮಟ್ಟದ ರಾಜ್ಯವಾಗಿ ರೂಪಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಸಾರ್ವಜನಿಕರ ಬಡಜನರ ಸಂಕಷ್ಟ, ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರ ನಿವಾರಣೆ ಮಾಡಲು ಹಗಲಿರುಳು ಕೆಲಸ ನಿರ್ವಹಿಸುತ್ತೇನೆ. ಹಣಕಾಸಿನ ಸ್ಥಿತಿಯನ್ನು ಉತ್ತಮ ಗೊಳಿಸಲು ಸರ್ವಥಾ ಕೆಲಸ ಮಾಡುತ್ತೇನೆ. ಪಕ್ಷದ ವರಿಷ್ಠರು ಯಾವುದೇ ಷರತ್ತು ವಿಧಿಸಿಲ್ಲ. ಪಕ್ಷದ ವರಿಷ್ಠರ ಆಶೀರ್ವಾದವೇ ನನಗೆ ಬಲ. ಜನರ ಸೇವೆಯನ್ನು ಮಾಡಲು ಸಕ್ರಿಯವಾಗಿ ತೊಡಗಿಕೊಳ್ಳುತ್ತೇನೆ. ಪಕ್ಷ, ಶಾಸಕರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಸರ್ಕಾರ ನೀಡುತ್ತೇನೆ. 

ಬುಧವಾರ ಬೆಳಿಗ್ಗೆಯೇ ಬೊಮ್ಮಾಯಿ ಪ್ರಮಾಣವಚನ

ಬುಧವಾರ ಬೆಳಿಗ್ಗೆಯೇ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರಿಸಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಗೋವಿಂದ ಕಾರಜೋಳ ಅವರು ಬೊಮ್ಮಾಯಿ ಹೆಸರು ಸೂಚಿಸಿದರು. ಸಭೆಯಲ್ಲಿ ಅಧಿಕೃತ ಒಪ್ಪಿಗೆ ದೊರೆತಿಯಿತು. ರಾಜ್ಯಪಾಲರ ಭೇಟಿಗಾಗಿ ಬಸವರಾಜ ಬೊಮ್ಮಾಯಿ ರಾಜಭವನಕ್ಕೆ ಹೊರಟರು.

'ಬಸವರಾಜ ಸಿ.ಎಂ. ಆಗುತ್ತಾರೆಂದು ಗೊತ್ತಿತ್ತು'

ಬಸವರಾಜ ಸಿ.ಎಂ. ಆಗುತ್ತಾರೆಂದು ಗೊತ್ತಿತ್ತು: ಬೊಮ್ಮಾಯಿ ಮಾವ ಎನ್.ಎಂ. ಪಾಟೀಲ, ಅಕ್ಕ ಉಮಾ ಪಾಟೀಲ

ಬೊಮ್ಮಾಯಿ ಆಯ್ಕೆ ಸಂತಸ ತಂದಿದೆ: ಚನ್ನು ಪಾಟೀಲ

ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಅವರ ಆಯ್ಕೆ ನಮ್ಮೆಲರಿಗೂ ಸಂತಸ ತಂದಿದೆ. ಇದಕ್ಕೆ ಕಾರಣಕರ್ತರಾದ ಎಲ್ಲಾ ನಾಯಕರಿಗೆ ಹಾಗೂ ಶಿಗ್ಗಾವಿ ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬೊಮ್ಮಾಯಿ ಅವರ ಆಪ್ತ ಸಹಾಯಕರಾದ ಚನ್ನು ಪಾಟೀಲ ಅವರು ಹೇಳಿದರು.

ಶಾಸಕಾಂಗ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಅಧಿಕೃತ ಘೋಷಣೆ

ಶಾಸಕಾಂಗ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಅಧಿಕೃತ ಘೋಷಣೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.

ಮಂಗಳವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಬುಧವಾರವೇ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಬಿಜೆಪಿ ಹೈಕಮಾಂಡ್ ವೀಕ್ಷಕರಾಗಿ ನೇಮಿಸಿದ್ದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ, ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಅರುಣ್ ಸಿಂಗ್ ಉಪಸ್ಥಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಬೊಮ್ಮಾಯಿ ಕಿರುಪರಿಚಯ

ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಮಗನಾದ ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ರಾಜಕಾರಣ ಆರಂಭಿಸಿ ಬಿಜೆಪಿಗೆ ಬಂದವರು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬೊಮ್ಮಾಯಿ, ಮೂರು ಬಾರಿ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಬೊಮ್ಮಾಯಿ ಹೆಸರು ಪ್ರಸ್ತಾಪ

ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ಬೆಂಗಳೂರಿನ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದ್ದು, ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಹೆಸರನ್ನು ಪ್ರಸ್ತಾಪಿಸಲಾಗಿದೆ. 

ಶಾಸಕಾಂಗ ಪಕ್ಷದ ಸಭೆಗೆ ಬಿಎಸ್‌ವೈ, ಬೊಮ್ಮಾಯಿ

ಶಾಸಕಾಂಗ ಪಕ್ಷದ ಸಭೆ ಬಿಎಸ್‌ವೈ

ಹಂಗಾಮಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ವೀಕ್ಷಕರಾದ ಧರ್ಮೇಂದ್ರ ಪ್ರಧಾನ್‌ ಮತ್ತು ಕಿಶನ್‌ ರೆಡ್ಡಿ ಅವರೊಂದಿಗೆ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿರುವ ಕ್ಯಾಪಿಟಲ್‌ ಹೋಟೆಲ್‌ಗೆ ತೆರಳಿದ್ದಾರೆ. 

ಧರ್ಮೇಂದ್ರ ಪ್ರಧಾನ್ ಅವರನ್ನು ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅಭಿನಂದಿಸಿದರು

ಧರ್ಮೇಂದ್ರ ಪ್ರದಾನ್ ಭೇಟಿ ಮಾಡಿದ ಗೋವಿಂದ ಕಾರಜೋಳ, ವೀರಣ್ಣ ಚರಂತಿಮಠ

ಶಾಸಕಾಂಗ ಸಭೆಗೆ ಒಟ್ಟಿಗೆ ಬಂದ ಬಿ.ಸಿ.ಪಾಟೀಲ, ಭೈರತಿ, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್,

ಬಿಜೆಪಿ ಶಾಸಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ಸಿದ್ದರಾಮಯ್ಯ

‘ಯಡಿಯೂರಪ್ಪ ಅವರು ಶಾಸಕರ ಬೆಂಬಲದ ಮೇಲೆ ಮುಖ್ಯಮಂತ್ರಿ ಆದವರು. ಅವರನ್ನು ಇದ್ದಕ್ಕಿದ್ದಂತೆ ಕಿತ್ತು ಹಾಕಿದ್ದಾರೆ. ಅವರ ಹೈಕಮಾಂಡ್‌ನವರು ಶಾಸಕರ ಅಭಿಪ್ರಾಯ ಕೇಳಿದರೇ? ಮುಂದಿನ ಮುಖ್ಯಮಂತ್ರಿ ಆಯ್ಕೆಯ ಹಕ್ಕು ಕೂಡ ಆ ಶಾಸಕರಿಗಿಲ್ಲ. ಬಿಜೆಪಿ ಶಾಸಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ಅವರ ಮಾತಿಗೆ ಕಿಮ್ಮತ್ತಿಲ್ಲ. ಹೈಕಮಾಂಡ್ ಮಾತಿಗೆ ಸುಮ್ಮನೆ ತಲೆ ಆಡಿಸಬೇಕಷ್ಟೆ. ಅವರು ಯಾರನ್ನು ಬೇಕಾದರೂ ಅಧಿಕಾರದಿಂದ ಕಿತ್ತು ಹಾಕಬಹುದು; ಇಷ್ಟ ಬಂದವರನ್ನು ಕುರ್ಚಿಯಲ್ಲಿ ಕೂರಿಸಬಹುದು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೆಳಗಾವಿಯ ಖಾನಾಪುರದಲ್ಲಿ ವ್ಯಂಗ್ಯವಾಡಿದರು.

‘ರಾಷ್ಟ್ರೀಯ ಪಕ್ಷ ಅಂದ ಮೇಲೆ ಹೈಕಮಾಂಡ್ ಇರುವುದು ಸಹಜ. ಆದರೆ, ರಾಜ್ಯದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ’ ಎಂದರು.

ಬೊಮ್ಮಾಯಿ, ಬೆಲ್ಲದ ಹೆಸರು ಮುಂಚೂಣಿಗೆ?

ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾಜಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಅರವಿಂದ ಬೆಲ್ಲದ ಹೆಸರು ಮುಂಚೂಣಿಗೆ ಬಂದಿದೆ.

ಕ್ಯಾಪಿಟಲ್‌ ಹೋಟೆಲ್‌ ಸುತ್ತ 150 ಪೊಲೀಸರ ಭದ್ರತೆ

ಬೆಂಗಳೂರು: ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದ್ದು, ಹೋಟೆಲ್ ಹಾಗೂ ಅದರ ಸುತ್ತಲು 150 ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

ಸಭೆ ನಿಗದಿ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಸ್ಥಳಕ್ಕೆ ಬಂದು ಭದ್ರತೆ ಕೈಗೊಳ್ಳುವ ಬಗ್ಗೆ ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದರು. ಹೋಟೆಲ್ ವ್ಯವಸ್ಥಾಪಕರ ಜೊತೆ ಚರ್ಚಿಸಿ ಭದ್ರತೆ ಬಗ್ಗೆ ಚರ್ಚಿಸಿದರು. 150 ಸಿಬ್ಬಂದಿಗಳನ್ನು ಹೋಟೆಲ್‌ ಬಳಿ ಕರೆಸಿಕೊಂಡ ಡಿಸಿಪಿ, ಭದ್ರತೆಗೆ ನಿಯೋಜಿಸಿದರು.

ಹೋಟೆಲ್ ಪ್ರವೇಶ ದ್ವಾರ ಹಾಗೂ  ಸುತ್ತಮುತ್ತಲ ಪ್ರತಿಯೊಂದು ಕಡೆಯೂ ಪೊಲೀಸರು ಕಾವಲು ಕಾಯುತ್ತಿದ್ದಾರೆ. ರಾಜಭವನ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಿದ್ದು, ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಲು ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ.

ಕಾವೇರಿ ಕಡೆಗೆ ವೀಕ್ಷಕರು

ದೆಹಲಿಯಿಂದ ಬಂದು ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ತಂಗಿದ್ದ ವೀಕ್ಷಕರು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ ಕಡೆಗೆ ನಡೆದಿದ್ದಾರೆ. ಧರ್ಮೇಂದ್ರ ಪ್ರಧಾನ್‌, ಕಿಶನ್‌ ರೆಡ್ಡಿ, ಅರುಣ್‌ ಸಿಂಗ್‌ ಅವರು ಕೇಂದ್ರದ ವೀಕ್ಷಕರಾಗಿ ಬೆಂಗಳೂರಿಗೆ ಬಂದಿದ್ದಾರೆ. 

ಕ್ಯಾಪಿಟಲ್‌ ಹೋಟೆಲ್‌ ಕಡೆಗೆ ಬಿಜೆಪಿ ಶಾಸಕರು

ಬೆಂಗಳೂರಿನ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ಬಿಜೆಪಿ ಶಾಸಕರು ಆಗಮಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.