ADVERTISEMENT

‘ಸೆಂಟ್ರಲ್‌ ವಿಸ್ತಾ’ಗೆ ವಿರೋಧವೇಕೆ: ಬಿಜೆಪಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 16:37 IST
Last Updated 5 ಜೂನ್ 2021, 16:37 IST

ಬೆಂಗಳೂರು: ತನ್ನದೇ ಆಡಳಿತವಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ನೂರಾರು ಕೋಟಿ ರೂಪಾಯಿ ವೆಚ್ಚದ ನಿರ್ಮಾಣ ಕಾಮಗಾರಿಗಳ ಕುರಿತು ಮಾತನಾಡದ ಕಾಂಗ್ರೆಸ್‌, ‘ಸೆಂಟ್ರಲ್‌ ವಿಸ್ತಾ’ ಯೋಜನೆಯನ್ನು ವಿರೋಧಿಸುತ್ತಿರುವುದೇಕೆ ಎಂದು ಬಿಜೆಪಿ ರಾಜ್ಯ ಘಟಕ ಪ್ರಶ್ನಿಸಿದೆ.

ಈ ಕುರಿತು ಶನಿವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ರಾಜಸ್ತಾನದಲ್ಲಿ ₹ 266 ಕೋಟಿ ವೆಚ್ಚದಲ್ಲಿ ಶಾಸಕರ ಭವನ ನಿರ್ಮಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ₹ 900 ಕೋಟಿ ವೆಚ್ಚದಲ್ಲಿ ಶಾಸಕರ ವಸತಿ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ, ದೇಶದ ಪ್ರಜಾಪ್ರಭುತ್ವದ ಸಂಕೇತವಾಗಲಿರುವ ನೂತನ ಸಂಸತ್‌ ಭವನವನ್ನು ಮಾತ್ರ ಕಾಂಗ್ರೆಸ್‌ ವಿರೋಧಿಸುತ್ತಿದೆ’ ಎಂದಿದೆ.

‘ಸೆಂಟ್ರಲ್‌ ವಿಸ್ತಾ’ ಕಾಮಗಾರಿ ತಪ್ಪು ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಆದರೆ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 52 ಎಕರೆ ವಿಸ್ತೀರ್ಣದಲ್ಲಿ ನೆಹರೂ ಸ್ಮಾರಕ, 45 ಎಕರೆ ವಿಸ್ತೀರ್ಣದಲ್ಲಿ ಇಂದಿರಾ ಗಾಂಧಿ ಸ್ಮಾರಕ ಮತ್ತು 15 ಎಕರೆ ವಿಸ್ತೀರ್ಣದಲ್ಲಿ ರಾಜೀವ್‌ ಗಾಂಧಿ ಸಮಾಧಿ ನಿರ್ಮಿಸಲಾಗಿದೆ. ಅದಕ್ಕಿಂತ ಕಡಿಮೆ ಜಾಗವನ್ನು ಬಳಸುವ ಸಂಸತ್‌ ಭವನ ನಿರ್ಮಾಣವನ್ನು ಅದೇ ಕಾಂಗ್ರೆಸ್‌ ವಿರೋಧಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ADVERTISEMENT

ಸದಾ ಕಾಲವೂ ದೇಶದ ಹಿತಾಸಕ್ತಿಯ ವಿರುದ್ಧ ಕೆಲಸ ಮಾಡುವುದು ಕಾಂಗ್ರೆಸ್‌ ಪಕ್ಷದ ಸ್ವಭಾವ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿರೋಧಿಸಿದ್ದ ಪಕ್ಷವೇ ಈಗ ನೂತನ ಸಂಸತ್‌ ಭವನ ನಿರ್ಮಾಣವನ್ನೂ ವಿರೋಧಿಸುತ್ತಿದೆ. ದೇಶದಲ್ಲಿ ಕೋವಿಡ್‌ ಸಂಕಷ್ಟ ಇರುವಾಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಟಲಿ ಪ್ರವಾಸಕ್ಕೆ ತೆರಳಿದ್ದರು. ಇಂತಹ ವ್ಯಕ್ತಿಗಳು ಈಗ, ‘ದೇಶ ಸಂಕಷ್ಟದಲ್ಲಿರುವಾಗ ಸೆಂಟ್ರಲ್ ವಿಸ್ತಾದಂತಹ ಕಾಮಗಾರಿಗಳು ಅನಗತ್ಯ’ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.