ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ 23 ಕ್ಷೇತ್ರ ಸಿಬ್ಬಂದಿಯನ್ನು ಜಾತಿವಾರು ಸಮೀಕ್ಷೆಗೆ ಬಳಸಿಕೊಂಡಿದ್ದು, ಇದರಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕಾರ್ಯಕ್ಕೆ ತೊಂದರೆ ಆಗಿದೆ. ಇವರಿಗೆ ಸಮೀಕ್ಷೆ ಕಾರ್ಯದಿಂದ ವಿನಾಯಿತಿ ನೀಡಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಪಿ.ಸಿ. ರೇ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರಿಗೆ ಪತ್ರ ಬರೆದಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ 260 ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಬೆಂಗಳೂರು ಮಹಾನಗರಕ್ಕೆ ತೀರಾ ಹತ್ತಿರದಲ್ಲಿರುವ ಒಂದು ಪ್ರಮುಖ ರಕ್ಷಿತ ಅರಣ್ಯ ಪ್ರದೇಶ. ಇಲ್ಲಿ ನಿತ್ಯವೂ ಮಾನವ– ವನ್ಯಜೀವಿ ಸಂಘರ್ಷದ ಪ್ರಕರಣಗಳು ಹಾಗೂ ವನ್ಯಜೀವಿ ಕಳ್ಳಬೇಟೆ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 2024–25ನೇ ಸಾಲಿನಲ್ಲಿ ಈವರೆಗೆ ಕಾಡಾನೆ ದಾಳಿಯಿಂದ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಬೆಳೆ ನಾಶವೂ ಆಗಿದೆ. ಈಗ ಬೆಳೆ ಕಾಲ ಆಗಿರುವುದರಿಂದ ಮಾನವ–ವನ್ಯಜೀವಿ ಸಂಘರ್ಷ ತಡೆಯಲು ಗಸ್ತು ಅರಣ್ಯ ಪಾಲಕರು, ಉಪವಲಯ ಅರಣ್ಯಾಧಿಕಾರಿಗಳು ಮತ್ತು ವಲಯ ಅರಣಾಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ.
ಮಾನವ–ವನ್ಯಜೀವಿ ಸಂಘರ್ಷ ತಡೆಯಲು, ಕಳ್ಳಬೇಟೆ ನಿಗ್ರಹಿಸಲು, ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವನ್ಯಜೀವಿಗಳ ಚಲನ–ವಲನಗಳ ಮೇಲೆ ನಿಗಾವಹಿಸಿ, ಅವುಗಳು ಕಾಡಿನಿಂದ ಹೊರಗೆ ಬರದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಹೊರ ಬಂದರೆ ಕಾಡಿಗೆ ಹಿಮ್ಮೆಟ್ಟಿಸಲು ಸಿಬ್ಬಂದಿಯ ಅಗತ್ಯವಿದೆ. ಆದ್ದರಿಂದ 23 ಮಂದಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.