ADVERTISEMENT

ರಾಜ್ಯದಲ್ಲಿ 'ಒಂದು ಜಿಲ್ಲೆ, ಒಂದು ಕ್ರೀಡೆ' ಜಾರಿ: ಸಚಿವ ಬಿ. ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 12:50 IST
Last Updated 26 ಜುಲೈ 2023, 12:50 IST
ಬಿ. ನಾಗೇಂದ್ರ
ಬಿ. ನಾಗೇಂದ್ರ   

ಬೀದರ್‌: ರಾಜ್ಯದಲ್ಲಿ ‘ಒಂದು ಜಿಲ್ಲೆ, ಒಂದು ಕ್ರೀಡೆ’ ಯೋಜನೆ ಜಾರಿಗೆ ತರಲಾಗುವುದು. ಇದರ ಮೂಲಕ ಎಲ್ಲಾ ಜಿಲ್ಲೆಗಳ ಕ್ರೀಡೆ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ತಿಳಿಸಿದರು.

ನಗರದಲ್ಲಿ ಬುಧವಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ಒಂದು ಬಗೆಯ ಕ್ರೀಡೆ ಬಗ್ಗೆ ಅಭಿರುಚಿ ಇದೆ. ಬೆಳಗಾವಿಯಲ್ಲಿ ಕುಸ್ತಿಗೆ ಹೆಚ್ಚು ಪ್ರಾಮುಖ್ಯತೆ ಇದ್ದರೆ, ವಿಜಯಪುರದಲ್ಲಿ ಸೈಕ್ಲಿಂಗ್‌ ಹೆಚ್ಚಿದೆ. ಆಯಾ ಭಾಗದ ಕ್ರೀಡೆಗೆ ಪ್ರೋತ್ಸಾಹ ಕೊಟ್ಟು, ಅಲ್ಲಿನ ಕ್ರೀಡಾಪಟುಗಳಿಗೆ ಅದರಲ್ಲಿ ಬೆಳೆಯಲು ನೆರವು ನೀಡಲಾಗುವುದು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಣಿಗೊಳಿಸಲು ಇಲಾಖೆಯಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು

ರಾಜ್ಯದಲ್ಲಿ ಸದ್ಯ ಎರಡು ಇಲಾಖೆಗಳಿಗೆ ಮಾತ್ರ ಕ್ರೀಡಾಪಟುಗಳಿಗೆ ಮೀಸಲಾತಿ ಸೌಲಭ್ಯ ಇದೆ. ಇದನ್ನು ಎಲ್ಲಾ 30 ಇಲಾಖೆಗಳಿಗೆ ವಿಸ್ತರಿಸಲಾಗುವುದು. ಕ್ರೀಡಾ ಇಲಾಖೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ತರಬೇತುದಾರರ ಕೊರತೆ ನೀಗಿಸಲು ದೈಹಿಕ ಶಿಕ್ಷಕರ ಸೇವೆ ಪಡೆಯಲಾಗುವುದು. ಈಗಾಗಲೇ 172 ಜನರ ನೇಮಕಕ್ಕೆ ಅನುಮೋದನೆ ದೊರೆತಿದೆ. ಕೆಲವು ದಿನ ಶಾಲೆಗಳಿಗೆ ಮತ್ತು ಕೆಲವು ದಿನ ಅವರು ತರಬೇತುದಾರರಾಗಿ ಕೆಲಸ ನಿರ್ವಹಿಸುವರು. ಇದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಅನಂತರ ಸೂಕ್ತ ಯೋಜನೆ ರೂಪಿಸಲಾಗುವುದು. ಬಳ್ಳಾರಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸಲಾಗುವುದು. ಅದಕ್ಕಾಗಿ ಜಾಗ ಅಂತಿಮಗೊಳಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.

ADVERTISEMENT

ಯಾರು ಕೂಡ ಈ ಸರ್ಕಾರವನ್ನು ಐದು ವರ್ಷಗಳವರೆಗೆ ಅಲುಗಾಡಿಲು ಆಗುವುದಿಲ್ಲ. 136 ಜನ ಶಾಸಕರು ಒಗ್ಗಟ್ಟಾಗಿದ್ದೇವೆ. ನಮ್ಮ ವಿರೋಧಿಗಳು ಇಲ್ಲಿಯೇ ಇದ್ದು ಏನು ಮಾಡಲು ಆಗಿಲ್ಲ. ಸಿಂಗಪುರಕ್ಕೆ ಹೋಗಿ ಏನು ಮಾಡುತ್ತಾರೆ. ನಮ್ಮ ಸರ್ಕಾರದ ವೇಗ ನೋಡಿಕೊಂಡು ವಿರೋಧಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಕುತಂತ್ರ ಮಾಡುತ್ತಿದ್ದಾರೆ. ಬೆಂಕಿಯಿಲ್ಲದೆ ಹೊಗೆ ಬರುವುದಿಲ್ಲ. ಹೀಗಾಗಿಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅದರ ಬಗ್ಗೆ ಹೇಳಿದ್ದಾರೆ. ಅವರು ಕೂಡ ತಂತ್ರಕ್ಕೆ ಪ್ರತಿತಂತ್ರ ಮಾಡುತ್ತಿದ್ದಾರೆ ಎಂದರು.

ಯಾವ ಶಾಸಕರೂ ಸಚಿವರ ವಿರುದ್ಧ ಪತ್ರ ಬರೆದಿಲ್ಲ. ಕೆಲವರಿಗೆ ಅಸಮಾಧಾನವಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲಾಗುವುದು. ಜೆಡಿಎಸ್‌ನವರು ತಾವು ಜಾತ್ಯತೀತ ಎಂದು ಹೇಳಿಕೊಂಡು ಕೋಮುವಾದ ಪಕ್ಷದವರ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಳ್ಳುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ಜನ ಅವರಿಗೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.