ADVERTISEMENT

ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಿರಾ?: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 15:19 IST
Last Updated 13 ಏಪ್ರಿಲ್ 2024, 15:19 IST
<div class="paragraphs"><p>ಕೃಷ್ಣ ಬೈರೇಗೌಡ</p></div>

ಕೃಷ್ಣ ಬೈರೇಗೌಡ

   

ಬೆಂಗಳೂರು: ‘ಭದ್ರಾ ಮೇಲ್ದಂಡೆ ಯೊಜನೆಗೆ ₹ 5,300 ಕೋಟಿ ಬಿಡುಗಡೆ ಮಾಡುತ್ತೇವೆಂದು ಘೋಷಣೆ ಮಾಡುವಿರಾ? ಮಹದಾಯಿ ಯೋಜನೆಗೆ ಬಾಕಿ ಇರುವ ಪರಿಸರ ಇಲಾಖೆ ಅನುಮತಿ ಪತ್ರ ಕೊಡಿಸುವಿರಾ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು‌ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಚುನಾವಣಾ ಪ್ರಚಾರ ಕೈಗೊಳ್ಳಲು ಮೋದಿ ಭಾನುವಾರ ರಾಜ್ಯಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮೇಕೆದಾಟು ಯೋಜನೆಗೆ ಕಳೆದ ಐದು ವರ್ಷಗಳಿಂದ ಅನುಮತಿ ಕೊಟ್ಟಿಲ್ಲ. ಈ ಅನ್ಯಾಯ ಸರಿಪಡಿಸುವಿರಾ? ದಕ್ಷಿಣ ಭಾರತದ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ಹೇಗೆ ಇವೆಯೊ ಅದೇ ರೀತಿ ಉಳಿಸುವಿರಾ’ ಎಂದೂ ಕೇಳಿದರು.

ADVERTISEMENT

‘ನಮ್ಮಿಂದ ತೆರಿಗೆಯನ್ನೂ, ಲೋಕಸಭಾ ಕ್ಷೇತ್ರಗಳನ್ನೂ ಕಸಿಯಲಾಗುತ್ತಿದೆ. ‌ಬಿಜೆಪಿಯವರದ್ದು ಉಂಡೂ ಹೋದ ಕೊಂಡು ಹೋದ ಸಂಸ್ಕೃತಿ. ತೆರಿಗೆ ಜೊತೆಗೆ ನದಿ ನೀರು ಹಂಚಿಕೆಯಲ್ಲೂ ನಮಗೆ‌ ಅನ್ಯಾಯವಾಗಿದೆ. ಕೃಷ್ಣ, ತುಂಗಭದ್ರಾ, ಮಹದಾಯಿ, ಕಾವೇರಿ ಸೇರಿದಂತೆ ಅನೇಕ ನದಿ ನೀರಿನ ವಿಚಾರದಲ್ಲಿ ಮೋಸವಾಗಿದೆ’ ಎಂದರು.

‘ರಾಜ್ಯ ಬರಗಾಲಕ್ಕೆ ತುತ್ತಾಗಿದೆ. ನಮ್ಮ ನದಿಗಳ ನೀರು ಉಪಯೋಗಿಸಲು ಅನುವು ಮಾಡಿಕೊಡದೆ ಅನ್ಯಾಯ ಮಾಡಲಾಗುತ್ತಿದೆ. ನಮ್ಮ ಪಾಲಿನ ನೀರು ಬಳಸಲು ಅವಕಾಶ ಮಾಡಿಕೊಡಿ’ ಎಂದೂ ಪ್ರಧಾನಿಯನ್ನು ಅವರು ಆಗ್ರಹಿಸಿದರು.

‘ಶೋಭಾ ಬಗ್ಗೆ ಏಕೆ ಮಾತನಾಡುತ್ತಿಲ್ಲ?’

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ. ರಾಜೀವ್ ಗೌಡ ಮಾತನಾಡಿ, ‘15ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಕ್ಕೆ ಬಿಡುಗಡೆ ಮಾಡಬೇಕಿದ್ದ ₹ 5,495 ಕೋಟಿ ವಿಶೇಷ ಅನುದಾನವನ್ನು ಯಾಕೆ ಬಿಡುಗಡೆ ಮಾಡಿಲ್ಲ. 15ನೇ ಹಣಕಾಸು ಆಯೋಗದಲ್ಲಿ ಪೆರಿಫೆರಲ್ ರಿಂಗ್ ರಸ್ತೆಗೆ ನಿಗದಿಯಾಗಿದ್ದ ₹ 3 ಸಾವಿರವನ್ನು ತಡೆಹಿಡಿದಿದ್ದು ಏಕೆ. ಬಹಿರಂಗ ಚರ್ಚೆಗೆ ಕರೆದರೂ ಹಣಕಾಸು ಸಚಿವರು ಬರುತ್ತಿಲ್ಲವೇಕೆ. ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಇಡಿ, ಐಟಿ, ಸಿಬಿಐ ದಾಳಿ ನಡೆಸುತಿರುವ ಕೇಂದ್ರ ಸರ್ಕಾರ ಸಚಿವೆ ಶೋಭಾ ಬಗ್ಗೆ ಏಕೆ ಮಾತನಾಡುತ್ತಿಲ್ಲ’ ಎಂದು ಪ್ರಧಾನಿಯನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.