ADVERTISEMENT

66 ಶಾಸಕರಿಂದ ಸರ್ಕಾರ ರಚನೆ ಸಾಧ್ಯವೆ: ಶೋಭಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 20:12 IST
Last Updated 2 ಡಿಸೆಂಬರ್ 2019, 20:12 IST

ಬೆಂಗಳೂರು: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೇವಲ 66 ಶಾಸಕರನ್ನು ಇಟ್ಟುಕೊಂಡು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಯಾವ ಶಾಸಕರನ್ನು ನಂಬಿ ಸರ್ಕಾರ ರಚಿಸುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ಜನರ ದಾರಿ ತಪ್ಪಿಸಲೆಂದೇ ಸರ್ಕಾರ ರಚಿಸುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಜನರನ್ನು ಮರುಳು ಮಾಡಿ ದಾರಿ ತಪ್ಪಿಸುವ ಕಲೆಯನ್ನು ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ ಕರಗತ ಮಾಡಿಕೊಂಡಿದ್ದಾರೆ ಎಂದು ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವಂತೂ ಖಾಲಿ ಇಲ್ಲ. ಸರ್ಕಾರ ರಚನೆಗೆ 113 ಶಾಸಕರ ಬೆಂಬಲ ಬೇಕೆಂಬ ಕನಿಷ್ಠ ಲೆಕ್ಕಾಚಾರವೂ ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಅವರದೇ ಪಕ್ಷದ ನಾಯಕರಾದ ಪರಮೇಶ್ವರ, ಡಿ.ಕೆ.ಶಿವಕುಮಾರ್, ಎಚ್‌.ಕೆ.ಪಾಟೀಲ ಸೇರಿದಂತೆ ಯಾವುದೇ ನಾಯಕರೂ ಒಪ್ಪುತ್ತಿಲ್ಲ. ಸಿದ್ದರಾಮಯ್ಯ ಯಾರಿಗೂ ಬೇಡದ ಕೂಸಾಗಿದ್ದಾರೆ ಎಂದರು.

ADVERTISEMENT

ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್‌ ಸರ್ಕಾರದ ಕನಸು ಕಾಣುತ್ತಿದ್ದಾರೆ. ಗೋಕಾಕದ ತಮ್ಮ ಅಭ್ಯರ್ಥಿ ಅಶೋಕ ಪೂಜಾರಿ ಅವರನ್ನು ಮಂತ್ರಿ ಮಾಡುವುದಾಗಿಯೂ ಹೇಳಿದ್ದಾರೆ. ಇಷ್ಟಕ್ಕೂ ಇವರಿಗೆ ಬೆಂಬಲ ಕೊಡುವವರು ಯಾರು ಎಂಬುದನ್ನು ಅವರೇ ಹೇಳಬೇಕು ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಕಾಣಲಿದ್ದು, ಹೊಸ ಬದಲಾವಣೆ ಆಗಲಿದೆ. ಇಬ್ಬರೂ ನಾಯಕರು ನೆಲ,ಜಲ ಮತ್ತು ಭಾಷೆಗಾಗಿ ಶ್ರಮಿಸಲಿದ್ದಾರೆ. ಬಚಾವತ್‌ ಆಯೋಗದ ಶಿಫಾರಸಿನಂತೆ ರಾಜ್ಯವು ಕೃಷ್ಣಾ ನದಿಯ 170 ಟಿಎಂಸಿ ನೀರನ್ನು ಬಳಸಿಕೊಳ್ಳಲು ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಶೋಭಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.