ADVERTISEMENT

ಸುಧಾಕರ್‌ ಶಾಸಕ ಸ್ಥಾನ ರದ್ದು ಮಾಡಿ: ಕಾಂಗ್ರೆಸ್‌ ಆಗ್ರಹ

ಮುಖ್ಯಮಂತ್ರಿ, ಸ್ಪೀಕರ್‌ಗೆ ಮಹಿಳಾ ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 15:39 IST
Last Updated 25 ಮಾರ್ಚ್ 2021, 15:39 IST

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಮ್ಮ ಮೇಲಿರುವ ಆರೋಪದಿಂದ ತಪ್ಪಿಸಿಕೊಳ್ಳಲು ರಾಜ್ಯದ ಎಲ್ಲ ಶಾಸಕರಿಗೂ ಕಳಂಕ ಹೊರಿಸಲು ಯತ್ನಿಸಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವುದಷ್ಟೇ ಅಲ್ಲ ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಬೇಕು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ಸಮಿತಿ ಒತ್ತಾಯಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಶಾಸಕಿಯರೊಂದಿಗೆ ಗುರುವಾರ ಜಂಟಿ ಪ‍ತ್ರಿಕಾಗೋಷ್ಠಿ ನಡೆಸಿದ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌, ‘ಸುಧಾಕರ್‌ ಆರೋಗ್ಯ ಸಚಿವರಲ್ಲ. ಅನಾರೋಗ್ಯ ಸಚಿವ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಕ್ಷಣವೇ ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಸುಧಾಕರ್‌ ಶಾಸಕರಾಗಿಯೂ ಮುಂದುವರಿಯಲು ಅರ್ಹರಲ್ಲ. ವಿಧಾನಸಭೆಯ ಅಧ್ಯಕ್ಷರು ಸುಧಾಕರ್‌ ಅವರ ಸದಸ್ಯತ್ವ ರದ್ಧತಿಗೂ ಅಗತ್ಯ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ, ಸ್ಪೀಕರ್‌ ಸೇರಿದಂತೆ ಎಲ್ಲ ಶಾಸಕರ ಘನತೆಯನ್ನೂ ಕುಂದಿಸುವ ಕೆಲಸ ಮಾಡಿರುವವರ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸುಧಾಕರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್‌ ಸಮಿತಿ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಹೋರಾಟದ ರೂಪುರೇಷೆಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಪ್ರಧಾನಿಗೆ ದೂರು

‘ಎಲ್ಲ ಶಾಸಕರನ್ನೂ ಅವಮಾನಿಸಿರುವ ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇ-ಮೇಲ್ ಮೂಲಕ ಮನವಿ ರವಾನಿಸಲಾಗುವುದು. ಮುಖ್ಯಮಂತ್ರಿ, ಸ್ಪೀಕರ್ ಸೇರಿದಂತೆ ಎಲ್ಲ ಶಾಸಕರ ಜೀವನದ ಬಗ್ಗೆಯೂ ಕಳಂಕ‌ ಹೊರಿಸುವ ಕೆಲಸವನ್ನು ಸುಧಾಕರ್ ಮಾಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ರಮೇಶ್‌ ಕುಮಾರ್‌, ಎಚ್‌.ಡಿ ಕುಮಾರಸ್ವಾಮಿ ಅವರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಯಾವುದೇ ಶಾಸಕರ ವಿರುದ್ಧ ದಾಖಲೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿ‘

– ಲಕ್ಷ್ಮಿ ಹೆಬ್ಬಾಳ್ಕರ್‌, ಕಾಂಗ್ರೆಸ್‌ ಶಾಸಕಿ.

***

‘ಸ್ಪೀಕರ್‌ ಕ್ರಮ ಜರುಗಿಸಬೇಕಿತ್ತು‘
‘ತಮ್ಮ ಮೇಲೆ ಬಂದಿರುವ ಆರೋಪದಿಂದ ಮುಕ್ತರಾಗಲು ದಾಖಲೆ ಒದಗಿಸುವ ಕೆಲಸವನ್ನು ಸುಧಾಕರ್ ಮಾಡಲಿ. ಅದನ್ನು ಬಿಟ್ಟು ಎಲ್ಲ ಶಾಸಕರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದಿತ್ತು. ಅಸಭ್ಯ ವರ್ತನೆ ಆರೋಪದ ಮೇಲೆ ಕಾಂಗ್ರೆಸ್‌ ಶಾಸಕ ಬಿ.ಕೆ. ಸಂಗಮೇಶ್ವರ ಅವರನ್ನು ಸದನದಿಂದ ಅಮಾನತು ಮಾಡಿದ್ದ ಸ್ಪೀಕರ್‌, ಶಾಸಕರನ್ನು ಅವಮಾನಿಸಿದ ಸುಧಾಕರ್‌ ವಿರುದ್ಧವೂ ಕ್ರಮ ಜರುಗಿಸಬೇಕಿತ್ತು. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯದ ಧೋರಣೆ ಸರಿಯೆ?’

– ರೂಪಾ ಶಶಿಧರ್‌, ಕಾಂಗ್ರೆಸ್‌ ಶಾಸಕಿ

***

‘ಕಾನೂನು ಹೋರಾಟಕ್ಕೆ ಚಿಂತನೆ’

‘ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬ ಗಾದೆಗೆ ಸುಧಾಕರ್‌ ಪ್ರಕರಣ ಹೋಲುತ್ತದೆ. ಜನಪ್ರತಿನಿಧಿಯೊಬ್ಬರು ಹೀಗೆ ಮಾತನಾಡುವುದಾ? ಅವರ ಹೇಳಿಕೆಯಿಂದ ರಾಜ್ಯದ ಎಲ್ಲ ಶಾಸಕರನ್ನೂ ಜನರು ಅನುಮಾನದಿಂದ ನೋಡುವಂತಾಗಿದೆ. ಶಾಸಕಿಯರಂತೂ ಕ್ಷೇತ್ರದಲ್ಲಿ ಓಡಾಡುವುದೇ ಕಷ್ಟವಾಗಿದೆ. ಸುಧಾಕರ್‌ ವಿರುದ್ಧ ಕಾನೂನು ಹೋರಾಟಕ್ಕೂ ಚಿಂತನೆ ನಡೆದಿದೆ’

– ಸೌಮ್ಯಾ ರೆಡ್ಡಿ, ಕಾಂಗ್ರೆಸ್‌ ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.