ಬೆಂಗಳೂರು: ವಿದ್ಯಾರ್ಥಿನಿಯರು, ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ತಡರಾತ್ರಿಗಳಲ್ಲೂ ಕ್ಷೇಮವಾಗಿ ಓಡಾಡಲು ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ರಾಜ್ಯದ ಎಲ್ಲ ವೈದ್ಯಕೀಯ, ಅರೆ ವೈದ್ಯಕೀಯ, ನರ್ಸಿಂಗ್ ಕಾಲೇಜುಗಳಲ್ಲಿ ಅಳವಡಿಸಿಕೊಳ್ಳುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರ ಭದ್ರತೆ, ಸುರಕ್ಷತೆ ಮತ್ತು ಸುಸ್ಥಿತಿಯನ್ನು ಖಾತ್ರಿಗೊಳಿಸಲು ಸುರಕ್ಷತೆಯ ಹಲವು ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವೈದ್ಯಕೀಯ, ಅರೆವೈದ್ಯಕೀಯ, ಅಲೈಡ್ ಹೆಲ್ತ್‌ಸೈನ್ಸ್, ನರ್ಸಿಂಗ್ ಕಾಲೇಜು ಕ್ಯಾಂಪಸ್‌ಗಳ ಪ್ರವೇಶ ದ್ವಾರಗಳು, ನಿರ್ಗಮನ ದ್ವಾರಗಳು, ಕಾರಿಡಾರ್‌ಗಳು ಮತ್ತು ಸಾಮಾನ್ಯ ಪ್ರದೇಶಗಳು ಸೇರಿದಂತೆ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಕಾರಿಡಾರ್‌ಗಳೂ ಸೇರಿದಂತೆ ಎಲ್ಲ ಭಾಗಗಳಲ್ಲೂ ಸೂಕ್ತ ವಿದ್ಯುತ್ ಬೆಳಕು ಇರಬೇಕು. ಬೆಳಕಿನ ವ್ಯವಸ್ಥೆ ಕೈಕೊಡದಂತೆ ಬ್ಯಾಟರಿ, ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಇಡೀ ಕ್ಯಾಂಪಸ್‌ನ ಎಲ್ಲ ಕಡೆಯ ಚಲನವಲನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಬೇಕು. ಮೇಲ್ವಿಚಾರಣಾ ಘಟಕ ಸ್ಥಾಪಿಸಿ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಮೇಲೆ ನಿರಂತರ ಕಣ್ಗಾವಲು ಇಡಬೇಕು ಎಂದು ಸೂಚಿಸಲಾಗಿದೆ.
ಮಹಿಳೆಯರ ಮೇಲೆ ಯಾವುದೇ ರೀತಿಯ ಕಿರುಕುಳ, ತಾರತಮ್ಯ ಅಥವಾ ದುಷ್ಕೃತ್ಯ ನಡೆಯುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಅಂತಹ ಕೃತ್ಯಗಳು ಕಂಡು ಬಂದರೆ ನಿಯಮಗಳ ಪ್ರಕಾರ ತಕ್ಷಣವೇ ಕ್ರಮ ಜರುಗಿಸಬೇಕು. ಅವರ ಘನತೆ, ಗೌರವಕ್ಕೆ ಧಕ್ಕೆಯಾಗದಂತೆ ಪುರುಷ ಅಧಿಕಾರಿಗಳು, ಸಿಬ್ಬಂದಿ ನಡೆದುಕೊಳ್ಳುವುದನ್ನು ಖಾತ್ರಿಪಡಿಸಬೇಕು. ಈ ಕುರಿತು ಕಾರ್ಯಾಗಾರಗಳು, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಮಾನತೆ, ಸೌಕರ್ಯ ಮತ್ತು ವೃತ್ತಿಪರ ಬೆಳವಣಿಗೆಯನ್ನು ಉತ್ತೇಜಿಸಬೇಕು. ಕೆಲಸದಲ್ಲಿ ಅವರ ಯೋಗಕ್ಷೇಮ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸೌಲಭ್ಯಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಉಲ್ಲೇಖಿಸಲಾಗಿದೆ.
‘ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿಶ್ವವಿದ್ಯಾಲಯ ಖಂಡಿಸುತ್ತದೆ. ಉದ್ಯೋಗಸ್ಥ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿಯರ ಸುರಕ್ಷತೆ, ಸ್ವಾಭಿಮಾನಕ್ಕೆ ಧಕ್ಕೆಯಾಗುವ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದು ಎಲ್ಲರ ಜವಾಬ್ದಾರಿ. ವೈದ್ಯಕೀಯ, ಅರೆ ವೈದ್ಯಕೀಯ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳು ಜನರ ಆರೋಗ್ಯ ಸೇವೆಗೆ ಇಡೀ ಜೀವನ ಮುಡುಪಾಗಿಡುತ್ತಾರೆ. ಕಲಿಕಾ ಮತ್ತು ವೃತ್ತಿ ವಲಯಗಳಲ್ಲಿ ಅವರ ಸುರಕ್ಷತೆ ಖಾತ್ರಿಪಡಿಸುವುದು, ರಕ್ಷಣೆ ನೀಡುವುದು ಆಯಾ ಕಾಲೇಜುಗಳ ಕರ್ತವ್ಯ. ಹಾಗಾಗಿ, ಸುರಕ್ಷತೆಗೆ ಕ್ರಮಕೈಗೊಳ್ಳವುದನ್ನು ಕಡ್ಡಾಯಗೊಳಿಸಲಾಗಿದೆ’ ಎನ್ನುತ್ತಾರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್
ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜಿಗಳ ಸಿಬ್ಬಂದಿಯಲ್ಲಿ ಶೇ 40ರಷ್ಟು ವಿದ್ಯಾರ್ಥಿಗಳಲ್ಲಿ ಶೇ 60ಕ್ಕಿತ ಹೆಚ್ಚು ಹೆಣ್ಣು ಮಕ್ಕಳು ಇದ್ದಾರೆ. ಅವರೆಲ್ಲರ ಘನತೆ ಸುರಕ್ಷತೆಯನ್ನು ಕಾಪಾಡಲು ಕ್ರಮಕೈಗೊಳ್ಳಲಾಗಿದೆಡಾ.ಬಿ.ಸಿ.ಭಗವಾನ್ ಕುಲಪತಿ ರಾಜೀವ್ ಗಾಂಧಿ ವಿವಿ
ಡಾ.ಬಿ.ಸಿ.ಭಗವಾನ್
ರಕ್ಷಣಾತ್ಮಕ ಮತ್ತು ಅಂತರ್ಗತ ಪರಿಸರಕ್ಕೆ ಆದ್ಯತೆ
ಅಸುರಕ್ಷಿತ ಘಟನೆಗಳಿಗೆ ಕಡಿವಾಣ, ಕಠಿಣ ಕ್ರಮ
ಅಗತ್ಯ ಮುಂಜಾಗ್ರತೆ, ದೂರುಗಳ ತ್ವರಿತ ವಿಚಾರಣೆ
ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನ ಕಡ್ಡಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.