ADVERTISEMENT

ಹಳ್ಳಿಗಳಲ್ಲಿ ಸೇವೆ: ಯುವ ವೈದ್ಯರಿಗೆ ಸಲಹೆ

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಘಟಿಕೋತ್ಸವದಲ್ಲಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 14:58 IST
Last Updated 14 ಜುಲೈ 2020, 14:58 IST
ಬೆಳಗಾವಿಯ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದವರು ಕುಲಾಧಿಪತಿ ಪ್ರಭಾಕರ ಕೋರೆ ಅವರೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡರು
ಬೆಳಗಾವಿಯ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದವರು ಕುಲಾಧಿಪತಿ ಪ್ರಭಾಕರ ಕೋರೆ ಅವರೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡರು   

ಬೆಳಗಾವಿ: ‘ವೈದ್ಯಕೀಯ ಶಿಕ್ಷಣ ಮುಗಿಸಿದ ಯುವ ವೈದ್ಯರು ಸಮಾಜ ಸೇವೆಗೆ ಆದ್ಯತೆ ನೀಡಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 5 ವರ್ಷಗಳವರೆಗಾದರೂ ಕಾರ್ಯ ನಿರ್ವಹಿಸಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ತಿಳಿಸಿದರು.

ಇಲ್ಲಿ ಬುಧವಾರ ನಡೆದ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ 10ನೇ ಘಟಿಕೋತ್ಸವದಲ್ಲಿ ಬೆಂಗಳೂರಿನಿಂದ ಆನ್‌ಲೈನ್‌ನಲ್ಲಿ ಅವರು ಮಾತನಾಡಿದರು.

‘ನಗರ ಪ್ರದೇಶದಲ್ಲಿ ಶೇ.30ರಷ್ಟು ಜನರು ವಾಸಿಸುತ್ತಿದ್ದರೂ ಸಕಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಕೃಷಿಯನ್ನೇ ನಂಬಿರುವ ಹಳ್ಳಿಗಳಲ್ಲಿ ಶೇ 70ರಷ್ಟು ಜನ ವಾಸಿಸುತ್ತಿದ್ದಾರೆ. ಅವರು ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ, ಅವರಿಗೆ ಎಲ್ಲರೂ ನೆರವಾಗುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

ಜೀವನಾಡಿಯಾಗಿದೆ

‘ಗ್ರಾಮೀಣ ಜನರ ಸಾಮಾಜಿಕ ಜೀವನ ಮಟ್ಟ ಸುಧಾರಿಸಲು ಕೆಎಲ್‌ಇ ಸಂಸ್ಥೆಯ ಸಪ್ತರ್ಷಿಗಳು ಮಾಡಿದ ಕಾರ್ಯ ಅತ್ಯಂತ ಶ್ಲಾಘನೀಯ. ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆ ತರಲು ಬಯಸಿದ ಅವರು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯಾಸಂಸ್ಥೆಗಳನ್ನು ತೆರೆದು ನವಯುಗಾಂತರಕ್ಕೆ ನಾಂದಿ ಹಾಡಿದ್ದಾರೆ. ಸಂಸ್ಥೆಯು ವೈದ್ಯಕೀಯ ಶಿಕ್ಷಣ ಮತ್ತು ಸೇವೆಯಲ್ಲಿ ತೊಡಗಿ ಜನರ ಜೀವನಾಡಿಯಾಗಿದೆ. ಇಂತಹ ಸಂಸ್ಥೆಗಳಿಂದಾಗಿ ಉತ್ತರ ಕರ್ನಾಟಕವು ಸುಶಿಕ್ಷತರ ನಾಡಾಗಿ ಪರಿವರ್ತನೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಮಾಣಪತ್ರಕ್ಕಿಂತ ಬುದ್ಧಿಮತ್ತೆ, ಕೌಶಲ ಹಾಗೂ ಸಂಸ್ಕಾರ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ನಿರಂತರವಾಗಿ ಕಲಿಯುತ್ತಾ, ಜವಾಬ್ದಾರಿ ಅರಿತು ನಡೆಯಬೇಕು. ಗುಣಮುಖವಾದ ರೋಗಿಯು ಭಾವನಾತ್ಮಕವಾಗಿ ಅಭಿನಂದನೆ ಸಲ್ಲಿಸುವುದೇ ನಿಜವಾದ ಸುವರ್ಣ ಪದಕ ಎಂದು ಭಾವಿಸಬೇಕು’ ಎಂದು ಯುವ ವೈದ್ಯರಿಗೆ ಕಿವಿಮಾತು ಹೇಳಿದರು.

ಹುಬ್ಬಳ್ಳಿಯಲ್ಲಿ ವೈದ್ಯ ಕಾಲೇಜು

ಕುಲಪತಿ ಡಾ.ವಿವೇಕ ಸಾವೋಜಿ ಮಾತನಾಡಿ, ‘ಅಕಾಡೆಮಿಯು ರಾಜ್ಯದಲ್ಲಿ 2ನೇ ರ‍್ಯಾಂಕ್‌ ಪಡೆದು ರಾಷ್ಟ್ರಮಟ್ಟದಲ್ಲೂ ಖ್ಯಾತಿ ಗಳಿಸಿದೆ. ಪ್ರತಿ ವರ್ಷ ಅಮೆರಿಕದ ಜೆಪ್ಪರ್‌ಸನ್‌ ವಿಶ್ವವಿದ್ಯಾಲಯದಿಂದ 10 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗಕ್ಕೆ ಬರುತ್ತಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜು, ಬೆಂಗಳೂರು ಮತ್ತು ಪುಣೆಯಲ್ಲಿ ಆಸ್ಪತ್ರೆ ಆರಂಭಿಸಲಾಗುವುದು. ಬೆಳಗಾವಿಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಸೇವೆ ನೀಡಲಿದೆ’ ಎಂದು ತಿಳಿಸಿದರು.

ಕುಲಾಧಿಪತಿ ಡಾ.ಪ್ರಭಾಕರ ಕೋರೆ, ಪರೀಕ್ಷಾ ನಿಯಂತ್ರಕ ಡಾ.ಸುನೀಲ ಜಲಾಲಪುರೆ, ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಡಾ.ವಿ.ಎಸ್. ಸಾಧುನವರ, ಕಾರ್ಯದರ್ಶಿ ಡಾ.ಬಿ.ಜಿ. ದೇಸಾಯಿ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಡಾ.ವಿ.ಡಿ. ಪಾಟೀಲ, ಡಾ.ಎಂ.ವಿ. ಜಾಲಿ, ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಡಾ.ಶ್ರೀನಿವಾಸ ಪ್ರಸಾದ, ಡಾ.ಆರ್.ಎಸ್. ಮುಧೋಳ, ಸುಧಾ ರೆಡ್ಡಿ, ಎಂ.ಎಸ್. ಗಣಾಚಾರಿ ಉಪಸ್ಥಿತರಿದ್ದರು.

ಡಾ.ಅವಿನಾಶ ಕವಿ ಹಾಗೂ ಡಾ.ನೇಹಾ ಧಡೇದ ನಿರೂಪಿಸಿದರು.

–––

ಪದವಿ, ಪದಕ ಪ್ರದಾನ

ಒಟ್ಟು 1,398 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 44 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು. 12 ಮಂದಿ ಪಿಎಚ್.ಡಿ., 9 ಮಂದಿ ಪೋಸ್ಟ್‌ ಡಾಕ್ಟರಲ್, 400 ಸ್ನಾತ್ತಕೋತ್ತರ, 886 ಪದವಿ, 51 ಸ್ನಾತಕೋತ್ತರ ಪದವಿ ಡಿಪ್ಲೊಮಾ, 10 ಫೆಲೋಶಿಪ್ ಹಾಗೂ 16 ಡಿಪ್ಲೊಮಾ ಪದವಿ ನೀಡಲಾಯಿತು. ಎಂಬಿಬಿಎಸ್‌ನಲ್ಲಿ ಡಾ.ಸಂದೇಶ ಜೋಶಿ 3, ಡಾ.ಶಿವಾನಿ ಮರೆಗುದ್ದಿ ಮತ್ತು ಡಾ.ವಿಶಾಲ ಶಶಿಕಾಂತ ಕುಲಗೋಡ ತಲಾ ಒಂದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಬಿಡಿಎಸ್‌ನಲ್ಲಿ ಡಾ.ನಿಹಾರಿಕಾ ಸಬರವಾಲ, ಡಾ.ರೋಶನ್‌ ರಂಗ್ನೇಕರ, ಬಿ.ಫಾರ್ಮಾದಲ್ಲಿ ರೇವತಿ ಭಾಸ್ಕರ, ಬಿಎಸ್ಸಿ ನರ್ಸಿಂಗ್‌ನಲ್ಲಿ ಸಾವಿತ್ರಿ ಪಾಟೀಲ, ಫರ‍್ನಾಂಡಿಸ್ ಕ್ವಿನ್ಸಿ, ಫಿಸಿಯೋಥೆರಪಿಯಲ್ಲಿ ಮಾನಸಿ ಕಾರನಿಕ ಹಾಗೂ ಆಯುರ್ವೇದದಲ್ಲಿ ಡಾ.ಮಾಧುರಿ ರೊಡ್ಡ ಅವರು ತಲಾ 4 ಹಾಗೂ ಡಾ.ಭೀಮರೆಡ್ಡಿ ಮ್ಯಾಕಲ 3 ಚಿನ್ನದ ಪದಕಗಳನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.