ADVERTISEMENT

ನೆರವಿಗೆ ಬಾರದ ಸಿಬ್ಬಂದಿ: ಆಸ್ಪತ್ರೆ ಕಾರಿಡಾರ್‌ನಲ್ಲೇ ಹೆರಿಗೆ!

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 14:38 IST
Last Updated 27 ನವೆಂಬರ್ 2022, 14:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಯಾದಗಿರಿ: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಸ್ಪತ್ರೆಯ ಕಾರಿಡಾರ್‌ನಲ್ಲೇ ಶನಿವಾರ ಮಧ್ಯರಾತ್ರಿ ಹೆರಿಗೆಯಾಗಿದೆ.

ಆಸ್ಪತ್ರೆ ಆವಣದಲ್ಲಿ ನರಳಾಡಿದ ಚಾಂದ್‌ಬಿ ಎಂಬುವವರು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.

‘ಹೊಟ್ಟೆಯಿಂದ ಕೂಸು ಹೊರಬಂದಿದೆ’ ಎಂದು ಗೋಳಾಡಿ ಕರೆದರೂ ಸಿಬ್ಬಂದಿ ಬಾರದ ಕಾರಣ ಹೆರಿಗೆ ವೇಳೆ ಬಟ್ಟೆಯಿಂದ ಪತಿ ನವಾಜ್ ಮರೆಮಾಚಿದ್ದಾರೆ.

ADVERTISEMENT

‘ನಮಗೆ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸಲಿಲ್ಲ. ಮಗು ಹೊರಬಂದಿದೆ ಬನ್ನಿ ಅಂದರೂ ಬರಲಿಲ್ಲ’ ಎಂದು ಚಾಂದ್‌ಬಿ ಪತಿ ನವಾಜ್ ಆರೋಪಿಸಿದರು.

‘ಸಿಬ್ಬಂದಿ ಸರಿಯಾದ ಸಮಯಕ್ಕೆ ಬಂದರೆ ಸಹಾಯ ಆಗುತ್ತಿತ್ತು. ಹೆರಿಗೆ ರಕ್ತದ ಮಡುವಿ‌‌ನಲ್ಲಿ ಪತ್ನಿ ಇದ್ದರು‌’ ಎಂದು ನವಾಜ್ ನೋವು ತೊಡಿಕೊಂಡರು.

‘ಘಟನೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ, ಅವರು ವೈದ್ಯರ ಕೊರತೆ ಇದೆ ಎಂದು ಹೇಳಿದರು‌. ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ರಿಜ್ವಾನ್ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಆಸ್ಪತ್ರೆಯಲ್ಲಿ ಕೇವಲ ಇಬ್ಬರು ಸಿಬ್ಬಂದಿ ಇದ್ದರು’ ಎಂದು ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ದೂರಿದರು.

ಘಟನೆ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರಿಜ್ವಾನ್, ‘ಈಗ ಆಗಿರುವುದು ಆರನೇ ಮಗುವಿನ ಹೆರಿಗೆ. ಹೀಗಾಗಿ ಆಸ್ಪತ್ರೆಗೆ ಬಂದ ತಕ್ಷಣವೇ ಹೆರಿಗೆ ಆಗಿದೆ. ರಾತ್ರಿ 12.45ಕ್ಕೆ ಹೆರಿಗೆ ಆಗಿದೆ. 1 ಗಂಟೆಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ‌. ನಮ್ಮ ಸಿಬ್ಬಂದಿಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.