ADVERTISEMENT

ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಜಾನಪದ ಕಲೆ ಕ್ಷೀಣ

ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಸಂಸದ ವೈ. ದೇವೇಂದ್ರಪ್ಪ ಕಳವಳ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 3:14 IST
Last Updated 7 ಜನವರಿ 2021, 3:14 IST
ಉಚ್ಚಂಗಿದುರ್ಗ ಸಮೀಪದ ಅರಸೀಕೆರೆ ಗ್ರಾಮದ ಜ್ಞಾನ ಜ್ಯೋತಿ ಶಾಲೆ ಆವರಣದಲ್ಲಿ ನಡೆದ ಯಕ್ಷ ಸಂಭ್ರಮ ಕಾರ್ಯಕ್ರಮವನ್ನು ಸಂಸದ ವೈ. ದೇವೇಂದ್ರಪ್ಪ ಉದ್ಘಾಟಿಸಿದರು.
ಉಚ್ಚಂಗಿದುರ್ಗ ಸಮೀಪದ ಅರಸೀಕೆರೆ ಗ್ರಾಮದ ಜ್ಞಾನ ಜ್ಯೋತಿ ಶಾಲೆ ಆವರಣದಲ್ಲಿ ನಡೆದ ಯಕ್ಷ ಸಂಭ್ರಮ ಕಾರ್ಯಕ್ರಮವನ್ನು ಸಂಸದ ವೈ. ದೇವೇಂದ್ರಪ್ಪ ಉದ್ಘಾಟಿಸಿದರು.   

ಉಚ್ಚಂಗಿದುರ್ಗ: ‘ಆಧುನಿಕ ತಂತ್ರಜ್ಞಾನ, ಮೊಬೈಲ್‌, ಟಿ.ವಿ., ಕಂಪ್ಯೂಟರ್‌, ಇಂಟರ್‌ನೆಟ್‌ ಭರಾಟೆಯಲ್ಲಿ ಹಲವು ಜಾನಪದ ಕಲೆಗಳು ಅವಸಾನದ ಹಾದಿ ಹಿಡಿದಿವೆ’ ಎಂದು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಕಳವಳ ವ್ಯಕ್ತಪಡಿಸಿದರು.ಸಮೀಪದ ಅರಸೀಕೆರೆ ಗ್ರಾಮದ ಜ್ಞಾನ ಜ್ಯೋತಿ ಶಾಲೆಯ ಆವರಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಇಂಚರ ಗ್ರಾಮೀಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಕಲೆಯನ್ನೇ ನಂಬಿ ಜೀವನದ ಬಂಡಿ ಸಾಗಿಸುವ ಕಲೆಗಾರರ ಬದುಕು ಈಚೆಗೆ ಮುಳುಗುತ್ತಿರುವ ದೋಣಿಯಾಗಿದೆ. ಸಂಕಷ್ಟದಲ್ಲಿರುವ ಕಲೆಗಾರರನ್ನು ಗುರುತಿಸಿ ಅಕಾಡೆಮಿ ಪ್ರೋತ್ಸಾಹಿಸಿಬೇಕು’ ಎಂದು ಅವರು ಹೇಳಿದರು.

‘ಇಂದಿನ ಯುವ ಪೀಳಿಗೆ ಕಲೆಯೊಂದಿಗೆ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಿದರೆ ಸಮ ಸಮಾಜದ ನಿರ್ಮಾಣ ಸಾಧ್ಯ. ಶಿಕ್ಷಣದೊಂದಿಗೆ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಸಾಹಿತ್ಯವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು. ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಗ್ರಾಮೀಣ ಪ್ರದೇಶದ ಕಲೆಗಾರರನ್ನು ಗುರುತಿಸಿ ಗೌರವ, ಪ್ರಶಸ್ತಿ ನೀಡಿ ಕಲೆಯನ್ನು ಉತ್ತೇಜಿಸಬೇಕು’ ಎಂದರು.

ADVERTISEMENT

ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಮಾತನಾಡಿ, ‘ರಾಜ್ಯದ ಸಂಸದರಲ್ಲಿ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಕಲಾವಿದರಾಗಿ ಸಂಸತ್ ಪ್ರವೇಶಿಸಿದ ಮೊದಲ ಸಂಸದರು ಎನ್ನುವುದು ಕಲಾವಿದರ ಹೆಮ್ಮೆ’ ಎಂದು ಹೇಳಿದರು.

‘ಮೂಡಲಪಾಯ, ಪಡುವಲಪಾಯ ವಿಭಾಗಗಳಿಗೆ ರಾಜ್ಯ ಅಕಾಡೆಮಿ ಸಮಾನ ಅವಕಾಶವನ್ನು ಕಲ್ಪಿಸಿ ಪ್ರೋತ್ಸಾಹ ನೀಡುತ್ತಿದೆ. ಅಕಾಡೆಮಿಯಿಂದ ಹೊರಗುಳಿದ ಕಲಾವಿದರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಅಕಾಡೆಮಿಯ ಹೆಮ್ಮೆ’ ಎಂದು ಹೇಳಿದರು.

‘ಬಹುತೇಕ ಗ್ರಾಮೀಣ ಪ್ರದೇಶದ ಕಲಾವಿದರಿಗೆ ಅಕಾಡೆಮಿಯಿಂದ ದೊರೆಯುವ ಸವಲತ್ತುಗಳ ಮಾಹಿತಿ ಕೊರತೆ ಇದೆ. ಅಂತಹವರನ್ನು ಗುರುತಿಸಿ ಮಾಹಿತಿ ನೀಡಿ ಮುಖ್ಯವಾಹಿನಿ ತರುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ಕೋವಿಡ್ ಎದುರಾಗಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದರು. ಅವರ ನೆರವಿಗೆ ಅಕಾಡೆಮಿ ಶ್ರಮಿಸಿದೆ. ಸದ್ಯ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ಕಲಾವಿದರ ಚಟುವಟಿಕೆ ನಿಧಾನಗತಿಯಲ್ಲಿ ಗರಿಗೆದರಿದೆ ಎಂದು ಹೇಳಿದರು.

‘ಯಕ್ಷರಂಗ’ ಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ‘ಯಕ್ಷಗಾನ ಕಲೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ನಾಡು ನಮ್ಮದು. ಯಕ್ಷಗಾನ ದೈವೀ ಕಲೆಯಾಗಿದ್ದು, ಕೇವಲ ಪುರುಷರಿಗೆ ಸೀಮಿತವಾಗಿತ್ತು. ಈಚಿನ ದಿನಗಳಲ್ಲಿ ಸ್ತ್ರೀಯರೂ ಈ ಕಲೆಯಲ್ಲಿ ತೊಡಗಿರುವುದು ಸಂತಸದ ವಿಷಯವಾಗಿದೆ. ಕನ್ನಡ ಭಾಷಯನ್ನು ವೈಭವೀಕರಣ ಮಾಡಿ ಜಗತ್ತಿನ ಉದ್ದಗಲಕ್ಕೂ ಸಾರುತ್ತಿರುವ ಮಹಾನ್ ಕಲೆ ಯಕ್ಷಗಾನ’ಎಂದರು.

ಎಸ್.ಜೆ.ವಿ.ಪಿ ಕಾಲೇಜು ಪ್ರಾಧ್ಯಾಪಕ ಪ್ರೊ.ಎ. ಬಿ ರಾಮಚಂದ್ರಪ್ಪ, ಬಯಲಾಟ ಅಕಾಡೆಮಿ ಸದಸ್ಯ ಕೆ.ಎಂ. ಕೊಟ್ರಯ್ಯ, ಹಿರಿಯ ಮೂಡಲಪಾಯ ಕಲಾವಿದ ಬಿ. ಪರಶುರಾಮ, ರಿಜಿಸ್ಟಾರ್‌ ಎಸ್.ಎಚ್. ಶಿವರುದ್ರಪ್ಪ, ರಂಗಾರೆಡ್ಡಿ, ಮುನಿರೆಡ್ಡಿ, ಎನ್.ಎಸ್. ರಾಜು, ಮುಖಂಡರಾದ ಕೆ.ಬಿ. ಷಣ್ಮುಖಪ್ಪ, ನಾಗರಾಜು, ಮೈಲಪ್ಪ, ಚಂದ್ರಪ್ಪ, ಚನ್ನಬಸಪ್ಪ, ವಿಶ್ವನಾಥಯ್ಯ, ಕೋಡಿಹಳ್ಳಿ ಭೀಮಪ್ಪ, ಷಣ್ಮುಖಪ್ಪ, ಅಜ್ಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.