ADVERTISEMENT

ಯಲ್ಲಮ್ಮದೇವಿಯ ಮಂಗಳಸೂತ್ರ ಹರಿದಿಲ್ಲ: ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 13:59 IST
Last Updated 1 ಏಪ್ರಿಲ್ 2020, 13:59 IST

ಬೆಳಗಾವಿ: ‘ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಿಯ ಮಂಗಳಸೂತ್ರ ಹರಿದು ಬಿದ್ದಿದೆ ಎಂದು ಕೆಲವರು ವದಂತಿ ಹಬ್ಬಿಸಿದ್ದಾರೆ. ಅದು ಸುಳ್ಳು ಸುದ್ದಿಯಾಗಿದ್ದು, ಯಾರೂ ನಂಬಬಾರದು’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.

‘ವಿಶ್ವ ಕೊರೊನಾ ವೈರಾಣು ಸೋಂಕು ಮುಕ್ತವಾಗಲೆಂದು ಪ್ರಾರ್ಥಿಸಿ ದೇವಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಆದರೆ, ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ಹರಿಬಿಟ್ಟಿದ್ದಾರೆ. ಮಂಗಳವಾರ ರಾತ್ರಿಯಿಂದ ಇಂಥದ್ದೊಂದು ಸುಳ್ಳು ಸುದ್ದಿ ಹರಿದಾಡಿದ್ದರಿಂದ ರಾಜ್ಯ ಹಾಗೂ ಹೊರ ರಾಜ್ಯಗಳ ಭಕ್ತರು ಆತಂಕಗೊಂಡಿದ್ದಾರೆ. ನನಗೆ ಹಾಗೂ ದೇವಸ್ಥಾನದ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ವಾಸ್ತವವಾಗಿಅಂತಹ ಯಾವುದೇ ಘಟನೆ ನಡೆದಿಲ್ಲ. ಭಕ್ತರು ಆತಂಕಕ್ಕೆ ಒಳಗಾಗಬಾರದು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT