ADVERTISEMENT

ಮೇ 26ರಿಂದ ಮತ್ತೆ ಮಳೆ ಸಾಧ್ಯತೆ: ‘ಯೆಲ್ಲೊ ಅಲರ್ಟ್‌’ ಮುಂದುವರಿಕೆ

ಜೂನ್ ಮೊದಲ ವಾರ ಮುಂಗಾರು ಪ್ರವೇಶ

​ಪ್ರಜಾವಾಣಿ ವಾರ್ತೆ
Published 22 ಮೇ 2021, 19:25 IST
Last Updated 22 ಮೇ 2021, 19:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಇದೇ 26ರಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೌತೆ ಚಂಡಮಾರುತದ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಂದು ವಾರ ಧಾರಾಕಾರ ಮಳೆ ಸುರಿದಿತ್ತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾನುವಾರ (ಮೇ 23) ಹೆಚ್ಚು ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಮುಂದುವರಿಸಲಾಗಿದೆ.

ಉಳಿದ ಜಿಲ್ಲೆಗಳಲ್ಲಿ ಮೇ 25ರವರೆಗೆ ಮಳೆ ತಗ್ಗಲಿದೆ. ಆದರೆ, ಗುಡುಗು, ಸಿಡಿಲು ಹೆಚ್ಚಾಗಿ ಇರಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು. 26ರಿಂದ ಕರಾವಳಿ ಹಾಗೂ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದೂ ತಿಳಿಸಿದೆ.

ADVERTISEMENT

‘ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಎರಡೂ ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಇಲಾಖೆ ಮಾಹಿತಿ ನೀಡಿದೆ.

14 ರೈಲುಗಳ ಸಂಚಾರ ರದ್ದು

ಯಾಸ್ ಚಂಡಮಾರುತದ ಕಾರಣಕ್ಕೆ ಬೆಂಗಳೂರಿನಿಂದ ಹೊರ ರಾಜ್ಯದ ವಿವಿಧ ನಗರಗಳಿಗೆ ಪ್ರಯಾಣ ಬೆಳೆಸಬೇಕಿದ್ದ ಮತ್ತು ಅಲ್ಲಿಂದ ಮರಳಬೇಕಿದ್ದ 14 ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ರದ್ದುಪಡಿಸಿದೆ.

ಗುವಾಹಟಿ, ಮುಜಾಫರ್‌ಪುರ, ಬಾಗಲ್‌ಪುರ, ಕಾಮಕ್ಯ, ಹೌರಾ, ವಾಸ್ಕೋಡ ಗಾಮ, ಅಗರ್ತಲಾ, ಭುವನೇಶ್ವರ ನಗರ ಗಳಿಗೆ ಮೇ 29ರವರೆಗೆ ಸಂಚರಿಸಬೇಕಿದ್ದ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯು
ತಿಳಿಸಿದೆ.

ಜೂನ್‌ ಮೊದಲ ವಾರ ಮುಂಗಾರು: ‘ಜೂನ್‌ ಮೊದಲ ವಾರ ರಾಜ್ಯಕ್ಕೆ ನೈರುತ್ಯ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಈಗಿನ ಮಾಹಿತಿಯಂತೆ ನೈರುತ್ಯ ಮಾರುತಗಳು ಕೇರಳಕ್ಕೆ ಜೂನ್‌ 1ರಂದು ಪ್ರವೇಶಿಸಿದರೆ, ರಾಜ್ಯಕ್ಕೆ 5ರಂದು ಪ್ರವೇಶಿಸಬಹುದು. ಹಾಗಾಗಿ ಜೂನ್ ಆರಂಭದಲ್ಲೂ ಹೆಚ್ಚು ಮಳೆ ನಿರೀಕ್ಷಿಸಬಹುದು’ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.