ADVERTISEMENT

ದೊರೆಸ್ವಾಮಿ ಎಷ್ಟು ಲಾಠಿ ಏಟು ತಿಂದಿದ್ದಾರೆ?: ಮತ್ತೆ ವಿವಾದ ಸೃಷ್ಟಿಸಿದ ಯತ್ನಾಳ್

ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 9:58 IST
Last Updated 28 ಫೆಬ್ರುವರಿ 2020, 9:58 IST
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್   

ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 72 ವರ್ಷ ಕಳೆದಿವೆ. ಎಚ್.ಎಸ್‌.ದೊರೆಸ್ವಾಮಿ ಯಾವ ವಯಸ್ಸಿನಲ್ಲಿ ಹೋರಾಟ ಮಾಡಿದ್ದರು ಎಂಬುದು ಗೊತ್ತಿಲ್ಲ. ಸಾವರ್ಕರ್‌ ಅವರಷ್ಟು ಲಾಠಿ ಏಟನ್ನು ದೊರೆಸ್ವಾಮಿ ತಿಂದಿದ್ದಾರಾ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಪ್ರಶ್ನಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ದೊರೆಸ್ವಾಮಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವಾಗ ಎಚ್‌.ಡಿ.ಕುಮಾರಸ್ವಾಮಿ ಹುಟ್ಟಿರಲಿಲ್ಲ. ಕುಮಾರಸ್ವಾಮಿ ರಾಜಕೀಯಕ್ಕೆ ಏಕೆ ಬಂದರು ಹಾಗೂ ಸಾವಿರಾರು ಕೋಟಿ ಹಣ ಹೇಗೆ ಸಂಪಾದಿಸಿದರು ಎಂಬುದು ಗೊತ್ತಿದೆ. ನನ್ನ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ನೈತಿಕತೆ ಇಲ್ಲ’ ಎಂದು ಕಿಡಿಕಾರಿದರು.

‘ದೊರೆಸ್ವಾಮಿ ಆನೆ ಇದ್ದಂತೆ. ಆನೆ ನಡೆಯುವಾಗ ನಾಯಿ ಬೊಗಳಿದರೆ ಏನು ಆಗದು’ ಎಂಬ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆರೋಪಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್‌, ‘ಅವರು ಆನೆಯೊ, ಹಂದಿಯೊ ತಿಳಿಯದು’ ಎಂದರು.

ADVERTISEMENT

ಪಾಕಿಸ್ತಾನಕ್ಕೆ ಜೈ ಅಂದಿಲ್ಲ

‘ತೋಟಗಾರಿಕಾ ಸಚಿವ ನಾರಾಯಣಗೌಡ ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ. ಅವರು ಮತ್ತೊಂದು ರಾಜ್ಯಕ್ಕೆ ಜೈ ಎಂದಿದ್ದಾರೆ. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ಕನ್ನಡಪರ ಹೋರಾಟಗಾರರು ಧ್ವನಿ ಎತ್ತಲಿಲ್ಲ. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಮೊಳಗಿದಾಗ ಈ ಭೂ ಮಾಫಿಯಾ ಹೋರಾಟಗಾರರು ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದರು.

ಭೂ ಕಬಳಿಕೆ ಬಗ್ಗೆ ಗೊತ್ತಿದೆ

‘ಶಾಸಕ ರಮೇಶಕುಮಾರ್‌ ಅವರ ಇತಿಹಾಸ ಮತ್ತು ಭೂಕಬಳಿಕೆ ಬಗ್ಗೆ ನಮಗೂ ಗೊತ್ತಿದೆ. ಸಾಚಾ ಎಂಬಂತೆ ಮಾತನಾಡುವ ಬದಲು ತಮ್ಮ ಮನೆಯನ್ನು ಮೊದಲು ಶುಚಿಗೊಳಿಸಿಕೊಳ್ಳಲಿ. ಸತ್ಯಹರಿಶ್ಚಂದ್ರನ ಸಂತತಿಯವರಂತೆ ಮಾತನಾಡುವುದನ್ನು ಕಡಿಮೆ ಮಾಡಲಿ. ಅವರಿಂದ ಆದರ್ಶ ಜೀವನದ ಪಾಠ ಕಲಿಯುವ ಅಗತ್ಯವಿಲ್ಲ’ ಎಂದು ಯತ್ನಾಳ್‌ ತಿರುಗೇಟು ನೀಡಿದರು.

‘ಹೌದು ನನ್ನ ವಿರುದ್ಧ 23 ಪ್ರಕರಣಗಳಿವೆ.ನೀರಾವರಿ ಯೋಜನೆಗೆ ನಡೆದ ಹೋರಾಟ,ಪ್ರಧಾನಿ ನರೇಂದ್ರ ಮೋದಿ ಪರವಾಗಿ ಧ್ವನಿ ಎತ್ತಿದ ಪರಿಣಾಮ ಈ ಪ್ರಕರಣ ದಾಖಲಾಗಿವೆ. ಅತ್ಯಾಚಾರ, ಭೂಕಬಳಿಕೆ ಹಾಗೂ ನಕಲಿ ನೋಟು ದಂದೆಯ ಪ್ರಕರಣ ನನ್ನ ಮೇಲಿಲ್ಲ. ಸವಾರ್ಕರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್‌ ಮೊದಲು ಕ್ಷಮೆ ಕೇಳಲಿ. ಸದನಕ್ಕೆ ಬನ್ನಿ ನಾನೂ ಉತ್ತರ ಕೊಡುತ್ತೇನೆ’ ಎಂದು ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.