ಸುವರ್ಣ ವಿಧಾನಸೌಧ (ಬೆಳಗಾವಿ): ವಿಜಯಪುರದಲ್ಲಿ ನಡೆದ ವಕ್ಫ್ ಅದಾಲತ್‌ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಗೈರು ಹಾಜರಾಗದೇ ಇದ್ದಿದ್ದರೆ ಗೊಂದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ ಎಂದು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಾಣ ಸ್ವಾಮಿ, ಬಿಜೆಪಿಯ ಶಶಿಲ್ ನಮೋಶಿ, ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ ಅವರು ವಕ್ಫ್ ಆಸ್ತಿ ವಿವಾದ ಕುರಿತು ಎತ್ತಿದ ತಕರಾರುಗಳಿಗೆ ಅವರು ಉತ್ತರ ನೀಡಿದರು.
ವಿಜಯಪುರಕ್ಕೂ ಮೊದಲು ಬೀದರ್, ಧಾರವಾಡ, ಕಲಬುರಗಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಅದಾಲತ್ ನಡೆಸಲಾಗಿತ್ತು. ಅಲ್ಲಿ ಎಲ್ಲೂ ಸಮಸ್ಯೆಯಾಗಲಿಲ್ಲ. ವಿಜಯಪುರದಿಂದ ಸಮಸ್ಯೆ ಆರಂಭವಾಯಿತು. ಅದಾಲತ್‌ಗೆ ಗೈರು ಹಾಜರಾಗಿದ್ದ ಯತ್ನಾಳ ಅವರು ನಾಲ್ಕು ದಿನಗಳ ನಂತರ ಪ್ರತಿಭಟನೆ ನಡೆಸಿದರು. ರೈತರ 1,200 ಎಕರೆ ಕಬಳಿಸಲಾಗುತ್ತಿದ ಎಂಬ ಆರೋಪ ಮಾಡಿದರು. ಇದರಿಂದಾಗಿ ರಾಜ್ಯದ ಇತರೆಡೆಗೂ ವಿವಾದ ಹಬ್ಬಿತು ಎಂದರು.
ವಕ್ಫ್ ಮಂಡಳಿಗೆ ಸೇರಿದ 1.22 ಲಕ್ಷ ಎಕರೆಯಲ್ಲಿ ಉಳಿದಿರುವುದು ಸುಮಾರು 17 ಸಾವಿರ ಎಕರೆ ಮಾತ್ರ. ವಿಜಯಪುರದಲ್ಲಿ 11 ಎಕರೆಗೆ ನೋಟಿಸ್ ನೀಡಲಾಗಿತ್ತು. ವಕ್ಫ್ ಭೂಮಿ ಕಬಳಿಕೆ ಮಾಡಿರುವುದು ರೈತರಲ್ಲ, ಖಾಸಗಿ ವ್ಯಕ್ತಿಗಳು. ಅದೂ ಶೇ 90ರಷ್ಟು ಮುಸ್ಲಿಂ ಸಮುದಾಯದವರೇ ಕಬಳಿಸಿದ್ದಾರೆ. ನೋಟಿಸ್ ನೀಡುವುದು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಸರ್ಕಾರಗಳೂ ವಕ್ಫ್ ಆಸ್ತಿ ಸಂರಕ್ಷಣೆಗೆ ಕ್ರಮಕ್ಕೆ ಮುಂದಾಗಿವೆ. ಎಲ್ಲ ಸರ್ಕಾರಗಳ ಅವಧಿಯಲ್ಲೂ ನೋಟಿಸ್ ನೀಡಿವೆ. ಆದರೆ, ಈ ಬಾರಿ ರಾಜಕೀಯ ಲಾಭಕ್ಕಾಗಿ ವಿವಾದವಾಗಿಸಿದರು ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.