ADVERTISEMENT

₹10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌: ಪ್ರಧಾನಿಗೆ ಯಡಿಯೂರಪ್ಪ ಪತ್ರ

ಅತಿವೃಷ್ಟಿ, ಪ್ರವಾಹದ ಸಂಕಷ್ಟ ವಿವರಿಸಿರುವ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 19:55 IST
Last Updated 23 ಅಕ್ಟೋಬರ್ 2020, 19:55 IST
ಪ್ರವಾಹ- ಸಾಂದರ್ಭಿಕ ಚಿತ್ರ
ಪ್ರವಾಹ- ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಭಾರಿ ಮಳೆ ಮತ್ತು ಪ್ರವಾಹದಿಂದ ಅಪಾರ ನಷ್ಟ ಆಗಿದ್ದು, ಸಂತ್ರಸ್ತರ ಪರಿಹಾರಕ್ಕೆ ₹10 ಸಾವಿರ ಕೋಟಿ ಮೊತ್ತದ ವಿಶೇಷ ಪ್ಯಾಕೇಜ್‌ ಪ್ರಕಟಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ಮಳೆಯಿಂದ ಬಾಧಿತರಾಗಿರುವ ಕುಟುಂಬಗಳು ಮತ್ತು ರೈತರಿಗೆ ಪುನರ್‌ವಸತಿ ಕಲ್ಪಿಸಬೇಕಾಗಿದೆ ಎಂದು ಮುಖ್ಯಮಂತ್ರಿಯವರು ಇದೇ 17 ರಂದು ಬರೆದಿರುವ ಮೂರು ಪುಟಗಳ ಪತ್ರದಲ್ಲಿ ವಿವರಿಸಿದ್ದಾರೆ.

ಈ ಮೂರು ತಿಂಗಳ ಅವಧಿಯಲ್ಲಿ ಮಳೆ ಮತ್ತು ಪ್ರವಾಹದ ಕಾರಣ ಸುಮಾರು ₹21,609 ಕೋಟಿಗೂ ಅಧಿಕ ನಷ್ಟವಾಗಿದೆ. ಪ್ರವಾಹ ಪೀಡಿತ ಪ್ರದೇಶದ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಮನೆ–ಮಠ ಕಳೆದುಕೊಂಡಿ
ದ್ದಾರೆ. ಬೆಳೆದ ಫಸಲು ನಾಶವಾಗಿ ಹೋಗಿದೆ. ಇವರೆಲ್ಲರಿಗೂ ತಕ್ಷಣವೇ ಪರಿಹಾರ ಒದಗಿಸಬೇಕಾಗಿದೆ. ಇದ
ಕ್ಕಾಗಿ ನೆರವಿನ ಹಸ್ತ ಚಾಚಲೇಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಆಗಸ್ಟ್‌ನಿಂದ ಸೆಪ್ಟೆಂಬರ್‌ 15 ರವರೆಗೆ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಮಳೆಯಿಂದ ₹9,441 ಕೋಟಿ ಹಾನಿಯಾಗಿದೆ. ಸೆಪ್ಟೆಂಬರ್‌ 15 ರ ಬಳಿಕ ಮಳೆ ಮತ್ತು ಪ್ರವಾಹದಿಂದ ₹5,668 ಕೋಟಿ ನಷ್ಟವಾಗಿದೆ. ಅಕ್ಟೋಬರ್‌ ಮೊದಲ ವಾರದಿಂದ ಕರಾವಳಿ, ಉತ್ತರಕರ್ನಾಟಕದ ಭಾಗದಲ್ಲಿ ಮಳೆ, ಪ್ರವಾಹದಿಂದ ₹6,500 ಕೋಟಿಯಷ್ಟು ನಷ್ಟ ಆಗಿದೆ. ಈ ಮೂರೂ ತಿಂಗಳ ಅವಧಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 6 ಲಕ್ಷ ಹೆಕ್ಟೇರ್‌ನಲ್ಲಿದ್ದ ಬೆಳೆ ನಷ್ಟವಾಗಿದೆ. ರಸ್ತೆ, ಸೇತುವೆ, ಶಾಲಾ, ಅಂಗನವಾಡಿ ಕಟ್ಟಡಗಳು, ವಿದ್ಯುತ್ ಸಂಪರ್ಕದ ಮೂಲ ಸೌಕರ್ಯಗಳಿಗೂ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಪರಿಸ್ಥಿತಿಯನ್ನು ಕೂಲಂಕಷವಾಗಿ ಅವಲೋಕಿಸಿದ್ದೇನೆ. ತಕ್ಷಣದ ಪರಿಹಾರವಾಗಿ ತಲಾ ₹10 ಸಾವಿರ, ಮನೆ ಸಂಪೂರ್ಣ ಮತ್ತು ಭಾಗಶಃ ಕಳೆದುಕೊಂಡವರಿಗೆ ಮನೆಗಳ ಪುನರ್‌ ನಿರ್ಮಾಣಕ್ಕೆ ತಲಾ ₹5 ಲಕ್ಷ ಹಾಗೂ ಮನೆಗಳ ಸಣ್ಣ ಪುಟ್ಟ ದುರಸ್ತಿಗೆ ₹50 ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಹಿಂದಿನ ಎರಡು ವರ್ಷವೂ ಮಳೆ, ಪ್ರವಾಹ, ಭೂಕುಸಿತದಿಂದ ರಾಜ್ಯದ ಜನತೆ ಸಂಕಷ್ಟ ಅನುಭವಿಸಿದ್ದಾರೆ. ಇದರಿಂದ ಆತಂಕದಲ್ಲಿದ್ದಾರೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.