ADVERTISEMENT

ಯಡಿಯೂರಪ್ಪ ರಾಜೀನಾಮೆ ಕೊಡಿಸುವ ಅಗತ್ಯ ಈಗ ಇತ್ತೇ: ಲಕ್ಷ್ಮಿ ಹೆಬ್ಬಾಳಕರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 11:15 IST
Last Updated 26 ಜುಲೈ 2021, 11:15 IST
ಶಾಸಕಿ ಲಕ್ಷ್ಮಿ ಹೆಬ್ಬಾಳಕರ
ಶಾಸಕಿ ಲಕ್ಷ್ಮಿ ಹೆಬ್ಬಾಳಕರ    

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸುವ ಅಗತ್ಯ ಈಗ ಇತ್ತೇ ಎಂದು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕೆಪಿಸಿಸಿ ವಕ್ತಾರೆಯೂ ಆಗಿರುವ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿ ಮಾಧ್ಯಮ ‍ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಪಕ್ಷಾತೀತ ಲೆಜೆಂಡ್ ನಾಯಕ. ದುಃಖದಿಂದ ರಾಜೀನಾಮೆ ನೀಡುವ ಪ್ರಸಂಗ ಅವರಿಗೆ ಬರಬಾರದಿತ್ತು. ಆಡಳಿತದ ಮೇಲೆ ಇದರಿಂದ ಪರಿಣಾಮ ಆಗುತ್ತದೆ ಎನ್ನುವುದನ್ನು ಬಿಜೆಪಿ ಹೈಕಮಾಂಡ್ ಅರಿಯಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ಯಡಿಯೂರಪ್ಪ ಅವರು ನಡೆಸಿದ ಹೋರಾಟ, ಅವರಿಗಿದ್ದ ಧೈರ್ಯದ ಬಗ್ಗೆ ಅಭಿಮಾನ ಇದೆ. ಅಧಿಕಾರದ ಅವಧಿ ಪೂರ್ಣಗೊಳಿಸಲು ಅವಕಾಶ ಇರಬೇಕಿತ್ತು ಎನ್ನುವುದು ನನ್ನ ಅನಿಸಿಕೆ’ ಎಂದರು.

ADVERTISEMENT

‘ಅವರಿಗೆ ರಾಜಕೀಯದಲ್ಲಿ ಸುದೀರ್ಘ 50 ವರ್ಷಗಳ ಅನುಭವ ಇದೆ. ಇಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮತ್ತು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆ ಪಕ್ಷವನ್ನು ಅಧಿಕಾರಕ್ಕೆ ತಂದ ನಾಯಕ. ಇಂತಹ ದೊಡ್ಡ ವ್ಯಕ್ತಿಯ ಆಡಳಿತದ ಯುಗ ಅಂತ್ಯವಾಯಿತೇನೋ ಎಂದು ಅವರು ಭಾವುಕವಾಗಿ ಮಾತನಾಡಿದ್ದನ್ನು ನೋಡಿದಾಗ ಅನಿಸಿತು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕೋವಿಡ್ ಹಾವಳಿ ಮತ್ತು ಪ್ರವಾಹ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ರಾಜಕೀಯ ಬೆಳವಣಿಗೆ ಸರಿಯಲ್ಲ. ಜನರ ಕಾಳಜಿಗಿಂತ ರಾಜಕೀಯವೇ ಮುಖ್ಯವಾಗಿದ್ದು ಸರಿಯಲ್ಲ. ಆಡಳಿತಕ್ಕಿಂತ ಬಿಜೆಪಿಗೆ ರಾಜಕೀಯವೇ ಮುಖ್ಯವಾಗಿದೆ’ ಎಂದು ಟೀಕಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.