ADVERTISEMENT

ಆಗ ಬಸವಣ್ಣ, ಈಗ ಬಿಎಸ್‌ವೈ ವಿರುದ್ಧ ಮನುವಾದಿಗಳು ಜಯ ಸಾಧಿಸಿದ್ದಾರೆ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 14:23 IST
Last Updated 26 ಜುಲೈ 2021, 14:23 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ರೀತಿ ಮತ್ತು ಬಿಜೆಪಿ ಹೈಕಮಾಂಡ್ ಒತ್ತಡ ಹಾಕಿದ ರೀತಿ ಕೆಟ್ಟದ್ದಾಗಿದೆ. ಪಿತೂರಿ ನಡೆದಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಗೋಕಾಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ‘ಎರಡು ತಿಂಗಳಿಂದಲೂ ಚರ್ಚೆ ನಡೆಯುತ್ತಿತ್ತು. ಕೊನೆಗೂ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲಾಗಿದೆ. ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ, ಒತ್ತಡ ಹೇರಿ ರಾಜೀನಾಮೆ ಕೊಡಿಸಿದ್ದಾರೆ. ಅವರೊಬ್ಬ ಜನ ನಾಯಕ. ಪಕ್ಷ ಕಟ್ಟಲು ಹೋರಾಡಿದ್ದನ್ನ ಭಾವುಕವಾಗಿ ಹೇಳಿಕೊಂಡಿದ್ದಾರೆ. ದೆಹಲಿಗೆ ಕೂಡ ಬರುವುದಿಲ್ಲ ಎಂದೂ ಹೇಳಿದ್ದಾರೆ.ಗೌರವಯುತವಾಗಿ ಹೊರ ಹೋಗುವುದಕ್ಕೆ ಅವರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಒತ್ತಡ ತಂತ್ರ ಮಾಡಿ ರಾಜೀನಾಮೆ ಪಡೆಯಲು ಯಶಸ್ವಿಯಾಗಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಅವರನ್ನು ಮನುವಾದಿಗಳು ಒತ್ತಡ ಹೇರಿ ಮಂತ್ರಿ ಸ್ಥಾನದಿಂದ ಇಳಿಸಿದ್ದರು. ಅದೇ ಸ್ಥಿತಿ ಯಡಿಯೂರಪ್ಪ ಅವರಿಗೆ ಬಂದಿದೆ. ಇದು ದುಃಖಕರ. ಮನುವಾದಿಗಳು ಆಗಲೂ ಯಶಸ್ವಿಯಾಗಿದ್ದರು; ಈಗಲೂ ಆಗಿದ್ದಾರೆ. ಮನುವಾದಿಗಳ ವಿರುದ್ಧ ಅವರು ಹೋರಾಡಬೇಕು. ಒತ್ತಡದಿಂದ ಇಳಿಸಿದ್ದನ್ನು ಸಹಿಸಿಕೊಳ್ಳಲಾಗುವುದಿಲ್ಲ’ ಎಂದರು.

ADVERTISEMENT

‘ಇದರಿಂದ ಕಾಂಗ್ರೆಸ್‌ಗೆ ಲಾಭ ಅಥವಾ ನಷ್ಟ ಆಗಲಿದೆಯೇ ಎಂಬ ಬಗ್ಗೆ ಈಗಲೇ ಹೇಳಲಾಗುವುದಿಲ್ಲ. ನಮ್ಮ ಪಕ್ಷದ ಸಂಘಟನೆಯನ್ನು ನಾವು ಮಾಡುತ್ತೇವೆ. ಆದರೆ, ಅವರನ್ನು ಇಷ್ಟೊಂದು ಅವಮಾನಗೊಳಿಸಬಾರದಿತ್ತು’ ಎಂದು ತಿಳಿಸಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.