ADVERTISEMENT

ಆರು ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್'

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 5:59 IST
Last Updated 7 ಏಪ್ರಿಲ್ 2020, 5:59 IST
   

ಬೆಂಗಳೂರು: ರಾಜ್ಯಕ್ಕೆ ಮುಂಗಾರು ಪೂರ್ವ ಮಳೆ ಪ್ರವೇಶಿಸಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಏ.7ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಂಗಳವಾರ ಹೆಚ್ಚು ಮಳೆಯಾಗಲಿದ್ದು, 'ಯೆಲ್ಲೊ ಅಲರ್ಟ್ ಘೋಷಿಸಿದೆ.

ಬುಧವಾರವೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಲಿದೆ. ಉತ್ತರ ಒಳನಾಡು ಹಾಗೂ ಉಳಿದ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹೆಚ್ಚಾಗಿರಲಿದ್ದು, ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.

ADVERTISEMENT

ವಾಯುಭಾರ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಮಳೆಯಾಯಿತು. ಬಳ್ಳಾರಿ, ಚಿತ್ರದುರ್ಗ, ರಾಯಚೂರು, ವಿಜಯಪುರ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಸುರಿದಿದೆ. ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ವಾಡಿಕೆಗಿಂತ ಕಡಿಮೆ ಮಳೆ ವರದಿಯಾಗಿದೆ. ಮೇ ಅಂತ್ಯದವರೆಗೆ ಮುಂಗಾರು ಪೂರ್ವ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ ಸೋಮವಾರ 19 ಸೆಂ.ಮೀ. ಮಳೆಯಾಗಿದೆ. ಸಂಕೇಶ್ವರ 6, ಧರ್ಮಸ್ಥಳ, ಬಾದಾಮಿ, ತಿಪಟೂರು, ಮಡಿಕೇರಿ, ಬಾಳೆಹೊನ್ನೂರು ತಲಾ 3, ಆಲೂರು, ಶ್ರವಣ ಬೆಳಗೊಳ, ಸಂಡೂರು 2, ಸುಬ್ರಹ್ಮಣ್ಯ, ನರಗುಂದ, ಕುಷ್ಟಗಿ, ಇಳಕಲ್, ಚಾಮರಾಜನಗರ, ನಂಜನಗೂಡು, ಎಚ್.ಡಿ.ಕೋಟೆ ಹಾಗೂ ಕೆ.ಆರ್.ನಗರದಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.