ADVERTISEMENT

ಮೈಸೂರು: 1 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಯೋಗ ದಿನಾಚರಣೆಯಂದು ಸರ್ವಧರ್ಮ ಸಮನ್ವಯ ಸಂದೇಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 18:49 IST
Last Updated 20 ಜೂನ್ 2019, 18:49 IST
ಯೋಗ ದಿನಾಚರಣೆಗಾಗಿ, ಯೋಗಪಟುಗಳ ತಾಲೀಮು
ಯೋಗ ದಿನಾಚರಣೆಗಾಗಿ, ಯೋಗಪಟುಗಳ ತಾಲೀಮು   

ಮೈಸೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ, ಮೈಸೂರಿನ ರೇಸ್‌ಕೋರ್ಸ್‌ನಲ್ಲಿ ಶುಕ್ರವಾರ ಬೃಹತ್‌ ಯೋಗ ಪ್ರದರ್ಶನ ನಡೆಯಲಿದ್ದು, ಅಂದಾಜು ಒಂದು ಲಕ್ಷ ಯೋಗಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ಬಾರಿ ಯೋಗ ದಿನಾಚರಣೆಯಂದು ಸರ್ವಧರ್ಮ ಸಮನ್ವಯದ ಸಂದೇಶ ಸಾರಲು ನಿರ್ಧರಿಸಲಾಗಿದ್ದು, ಎಲ್ಲ ಧರ್ಮಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹೇಳಿದರು.

ಈ ಸಲ ಗಿನ್ನಿಸ್‌ ದಾಖಲೆಗೆ ಪ್ರಯತ್ನಿಸುತ್ತಿಲ್ಲ. ಆದರೂ ಅತಿಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ADVERTISEMENT

2017ರಲ್ಲಿ ಮೈಸೂರಿನಲ್ಲಿ ಒಂದೇ ಕಡೆ ಅತ್ಯಧಿಕ ಸಂಖ್ಯೆಯಲ್ಲಿ ಯೋಗಪಟುಗಳನ್ನು ಸೇರಿಸಿ ಯೋಗ ಪ್ರದರ್ಶನ ನೀಡಿದ್ದು ಗಿನ್ನಿಸ್‌ ದಾಖಲೆಗೆ ‍ಪಾತ್ರವಾಗಿತ್ತು. ಅಂದಿನ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 55,506 ಮಂದಿ ಪಾಲ್ಗೊಂಡಿದ್ದರು. 2018 ರಲ್ಲಿ ದಾಖಲೆ ನಿರ್ಮಿಸಲು ಪ್ರಯತ್ನ ನಡೆಯದಿದ್ದರೂ ಅಂದಾಜು 60 ಸಾವಿರ ಮಂದಿ ಭಾಗವಹಿಸಿದ್ದರು. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಯೋಗ ಫೆಡರೇಷನ್‌ ಆಫ್‌ ಮೈಸೂರು ಸಹಯೋಗದಲ್ಲಿ ಬೆಳಿಗ್ಗೆ 6ರಿಂದ 8ರವರೆಗೆ ಕಾರ್ಯಕ್ರಮ ನಡೆಯಲಿದೆ.

‘ಹೃದಯಕ್ಕಾಗಿ ಯೋಗ’ ಇಂದು
ಬೆಂಗಳೂರು:‘ಹೃದಯಕ್ಕಾಗಿ ಯೋಗ’ ಘೋಷವಾಕ್ಯದೊಂದಿಗೆ ರಾಜ್ಯದೆಲ್ಲೆಡೆ ಅಂತರರಾಷ್ಟ್ರೀಯ 5ನೇ ಯೋಗ ದಿನ ಆಚರಣೆಗೆ ಆಯುಷ್ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿಯಿಂದ ಸಾಮೂಹಿಕ ಯೋಗಭ್ಯಾಸ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ ತಿಳಿಸಿದರು.

ಇಂದು ದೀಪ ಯಜ್ಞ
ಹರಿಹರ: ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಅಂಗವಾಗಿ ಇಂದು ಸಂಜೆ 5ಕ್ಕೆ ಮಹಾಯೋಗಿಗಳ ಸಂಗಮ ಹಾಗೂ ದೀಪಯಜ್ಞ ಕಾರ್ಯಕ್ರಮ ಆಯೋಜಿಸಲಾಗಿದೆ. ಹರಿದ್ವಾರದ ಪೂಜಾನಿಷ್ಠ 24 ಪುರೋಹಿತ ಪಂಡಿತರಿಂದ ದೀಪಯಜ್ಞ, ವಚನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅರ್ಜೆಂಟೀನಾದ 15 ಯೋಗ ಸಾಧಕರಿಂದ ಯೋಗ ಪ್ರದರ್ಶನ ನಡೆಯಲಿದೆ.

ಪಶ್ಚಿಮ ಬಂಗಾಳದ 123 ವರ್ಷದ ಹಿರಿಯ ಯೋಗ ಸಾಧಕ ಸ್ವಾಮಿ ಶಿವಾನಂದಜಿ, ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಸ್ಪೇನ್‌ನ ಯೋಗಿನಿ ಪಾವೊಲಾ ಅಲೆಜಾಂದ್ರ ರಿಯೋಸ್‌, ಅರ್ಜೆಂಟಿನಾದ ಯೋಗಿ ಜಾರ್ಜ್‌ ಬಿದಾಂದೋ, ಇಬ್ರಾಹಿಂ ಸುತಾರ್‌ ಹಾಗೂ ಇತರರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.