
ಸುಪ್ರೀಂ ಕೋರ್ಟ್
ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿರುವ ಸಂಬಂಧ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪುರಸ್ಕರಿಸಿದೆ. ಇದರಿಂದಾಗಿ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸಂಕಷ್ಟ ಎದುರಾಗಿದೆ.
ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದ ಬಗ್ಗೆ ಕುಲಕರ್ಣಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ತನಿಖಾ ತಂಡವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್ ಎದುರು ಯೋಗೀಶಗೌಡ ಕೊಲೆ ನಡೆದಿತ್ತು. 2019ರ ಸೆಪ್ಟೆಂಬರ್ 6ರಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶಿಸಿತ್ತು.
ಸಿಬಿಐ ತನಿಖೆಯನ್ನು ಅಮಾನತಿನಲ್ಲಿ ಇರಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ 2020ರ ಫೆಬ್ರುವರಿ 21ರಂದು ತಡೆ ನೀಡಿದ್ದರಿಂದ ತನಿಖೆ ಮುಂದುವರಿಸಿದ್ದ ಸಿಬಿಐ, 2020ರ ನವೆಂಬರ್ 5ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.