ADVERTISEMENT

‘ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ ಎಂದು ನನ್ನ ಕಾಲು ಹಿಡಿದುಕೊಂಡಿದ್ದ ಯೋಗೇಶ್ವರ್’

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 1:55 IST
Last Updated 31 ಜುಲೈ 2020, 1:55 IST
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್   

ಬೆಂಗಳೂರು: ‘15 ದಿನಗಳ ಹಿಂದೆ ಯೋಗೇಶ್ವರ್ ನನ್ನ ಬಳಿ ಬಂದು ಕಾಲು ಹಿಡಿದುಕೊಂಡ. ಎಷ್ಟು ಹೇಳಿದರೂ ಪಾದ ಬಿಡಲೇ ಇಲ್ಲ. ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ. ಸದ್ಯದಲ್ಲೇ ಯಡಿಯೂರಪ್ಪನವರನ್ನು ಕುರ್ಚಿಯಿಂದ ಕೆಳಗಿಸುತ್ತಾರೆ ಎಂದಿದ್ದ. ಆಗ ನಾನು ಬೇಡಪ್ಪ, ನೀನು ಬಿಜೆಪಿಗೆ ನಿಷ್ಠನಾಗಿರು ಎಂದು ವಾಪಸು ಕಳುಹಿಸಿದ್ದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

‘ಹಗಲು ವೇಳೆ ಮಾತ್ರ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ನಮ್ಮ ಮುಖ್ಯಮಂತ್ರಿ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನೀಡಿದ ಹೇಳಿಕೆಗೆ ಅದೇ ಧಾಟಿಯಲ್ಲಿ ಶಿವಕುಮಾರ್ ಪ್ರತಿಕ್ರಿಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಶಿವಕುಮಾರ್, ‘ಈಗ ಯಾಕೆ ಹೀಗೆ ಮಾತಾಡುತ್ತಿದ್ದಾರೊ ಗೊತ್ತಿಲ್ಲ. ಮೆಂಟಲ್ ಆಗಿದ್ದಾರಾ’ ಎಂದೂ ಅನುಮಾನ ವ್ಯಕ್ತಪಡಿಸಿದರು.

ADVERTISEMENT

ಡಿ.ಕೆ. ಶಿವಕುಮಾರ್‌ ಹೇಳಿಕೆ ನೀಡಿದ ಬೆನ್ನಲ್ಲೆ ವಿಧಾನಪರಿಷತ್ ಕಾಂಗ್ರೆಸ್‌ ಸದಸ್ಯ ನಾರಾಯಣ ಸ್ವಾಮಿ, ‘ಶಿವಕುಮಾರ್ ಭೇಟಿಗೆ ಯೋಗೇಶ್ವರ್ ಬಂದಿದ್ದು ನಿಜ. ಅದಕ್ಕೆ ನಾನೇ ಸಾಕ್ಷಿ’ ಎಂದಿದ್ದಾರೆ.

ಸಂಸದ ಡಿ.ಕೆ. ಸುರೇಶ್‌, ‘ಬಾಯಿ ಚಪಲಕ್ಕೆ ಯೋಗೇಶ್ವರ್‌ ಏನೊ ಮಾತನಾಡಿದ್ದಾರೆ. ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಅನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಮಗೆ ರಾತ್ರಿ ಒಂದು, ಬೆಳಿಗ್ಗೆ ಒಂದು ಕೆಲಸ ಮಾಡುವುದು ಗೊತ್ತಿಲ್ಲ. ಯೋಗೇಶ್ವರ್‌ಗೆ ಇದು ರಕ್ತಗತ. ಅವರನ್ನು ಯಾರೂ ನಂಬುವುದಿಲ್ಲ. ಅವರನ್ನು ನಂಬಿ ಪರಿಷತ್‌ಗೆ ಬಿಜೆಪಿ ಹೇಗೆ ನೇಮಿಸಿತೊ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.