ADVERTISEMENT

ಕ್ರಿಕೆಟ್ ಆಡಲು ಹೋಗಿ ರಾಜಕಾರಣ ಸೇರಿದರು

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಬಿ.ವಿ. ಶ್ರೀನಿವಾಸ್ ನೇಮಕ

ಕೆ.ಎನ್.ಶ್ರೀಹರ್ಷ
Published 3 ಡಿಸೆಂಬರ್ 2020, 22:00 IST
Last Updated 3 ಡಿಸೆಂಬರ್ 2020, 22:00 IST
ಬಿ.ವಿ.ಶ್ರೀನಿವಾಸ್
ಬಿ.ವಿ.ಶ್ರೀನಿವಾಸ್   

ಭದ್ರಾವತಿ: ಪಟ್ಟಣದ ಬಿ.ವಿ. ಶ್ರೀನಿವಾಸ್ ಅವರು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಉನ್ನತ ಸ್ಥಾನಕ್ಕೆ ಏರಿರುವ ಬಗ್ಗೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಉಮಾದೇವಿ, ಜಿ. ವೆಂಕಟೇಶ್ ದಂಪತಿ ಪುತ್ರರಾದ ಶ್ರೀನಿವಾಸ್ ಅವರು ಇಲ್ಲಿನ ಹುತ್ತಾಕಾಲೊನಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ, ಅಜ್ಜ ಬಿ. ರಾಮಯ್ಯ ಅವರೊಂದಿಗೆ ಬೆಂಗಳೂರಿಗೆ ತೆರಳಿದ್ದರು.

ಪ್ರಾಥಮಿಕ ಶಾಲಾ ಹಂತದಲ್ಲೇ ಕ್ರಿಕೆಟ್ ಗೀಳು ಹಚ್ಚಿಸಿಕೊಂಡಿದ್ದ ಶ್ರೀನಿವಾಸ್ ಅವರ ಪ್ರತಿಭೆಯನ್ನು ಗುರುತಿಸಿದ್ದ ಅಜ್ಜ ರಾಮಯ್ಯ, ಅವರನ್ನು ಉತ್ತಮ ಕ್ರೀಡಾಪಟುವಾಗಿ ರೂಪಿಸಲು ಬೆಂಗಳೂರಿಗೆ ಕರೆದೊಯ್ದಿದ್ದರು. ಅದರ ಫಲವಾಗಿ 14 ಮತ್ತು 19 ವರ್ಷದೊಳಗಿನವರ ರಾಜ್ಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಕೀರ್ತಿ ಶ್ರೀನಿವಾಸ್‌ ಅವರಿಗಿದೆ.

ADVERTISEMENT

ಬೆಂಗಳೂರಿನ ನ್ಯಾಷನಲ್ ಕಾಲೇಜು ವಾತಾವರಣದಲ್ಲಿ ಬೆಳೆದ ಶ್ರೀನಿವಾಸ್‌ ಸಹಜವಾಗಿಯೇ ರಾಜಕೀಯ ನಾಯಕರ ಮಾತಿನಿಂದ ಅಕರ್ಷಿತರಾಗಿ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಎನ್ಎಸ್‌ಯುಐ ಜತೆ ಒಡನಾಟ ಬೆಳೆಸಿಕೊಂಡರು. 2010ರಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್‌ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣದ ನಂತರದಲ್ಲಿ ಸಾಕಷ್ಟು ಹೆಸರು ಮಾಡಿದರು. ಇವರನ್ನು ಗುರುತಿಸಿದ ಕಾಂಗ್ರೆಸ್ ಪಕ್ಷವು ರಾಜ್ಯ ಯುವ ಘಟಕದ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಘಟಕದ ಕಾರ್ಯದರ್ಶಿ ಜವಾಬ್ದಾರಿಗಳನ್ನು ನೀಡಿತ್ತು. ಇಂದು ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

‘ಬಾಲಕನಾಗಿದ್ದಾಗ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ಶ್ರೀನಿವಾಸನನ್ನು ಉತ್ತಮ ಕ್ರಿಕೆಟ್ ಪಟುವಾಗಿ ಮಾಡಲು ಬೆಂಗಳೂರಿಗೆ ಕರೆದುಕೊಂಡು ಹೋಗಲಾಯಿತು. ಆತ ಅಲ್ಲಿ ಹೇಗೆ ಬೆಳೆದ, ಇಷ್ಟು ದೊಡ್ಡ ಹುದ್ದೆ ಅಲಂಕರಿಸಿದ ಎಂಬುದು ಅಚ್ಚರಿ ಮೂಡಿಸಿದೆ.ಇಲ್ಲಿಗೆ ಬಂದಾಗ ಒಂದೆರಡು ಗಂಟೆಗಳು ಮಾತ್ರ ಇದ್ದು ಹೋಗುವ ಆತ ಅಷ್ಟು ಎತ್ತರಕ್ಕೆ ಬೆಳೆದಿರುವುದು ಖುಷಿ ತಂದಿದೆ’ ಎನ್ನುತ್ತಾರೆ ಶ್ರೀನಿವಾಸ್‌ ಅವರ ಸೋದರಮಾವ ಗಣೇಶ್.

‘ಶ್ರೀನಿವಾಸಣ್ಣ ಅವರ ನೇಮಕ ನಮಗೆ ಮತ್ತಷ್ಟು ಹುರುಪು ತುಂಬಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರೊಬ್ಬರು ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನ ಅಲಂಕರಿಸುವ ಮೂಲಕ ನಮ್ಮೂರಿಗೆ ಹೆಮ್ಮೆ ತಂದಿದ್ದಾರೆ’ ಎನ್ನುತ್ತಾರೆ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಡಿ. ವಿನೋದ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.